ಆಗಸ್ಟ್ 9, 1909 ವಿನಾಯಕ ಕೃಷ್ಣ ಗೋಕಾಕರು ಜನಿಸಿದ ದಿನ. ಡಾ. ವಿನಾಯಕ ಕೃಷ್ಣ ಗೊಕಾಕರೆಂದರೆ ನಮ್ಮ ಕಣ್ಣಮುಂದೆ ನಿಲ್ಲುವ ಚಿತ್ರ ಅಂತರಾಷ್ಟ್ರೀಯ ಖ್ಯಾತಿಯ ಎತ್ತರದ ವ್ಯಕ್ತಿ. ಕನ್ನಡಕದ ಹಿಂದಿನ ಆಳವಾದ ಒಳನೋಟದ ಕಣ್ಣು, ಗಂಭೀರ ಧ್ವನಿ, ಗಂಭೀರ ನಿಲುವು. ಈ ಪರಿಪಕ್ವ ವ್ಯಕ್ತಿತ್ವದ ಹಿಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಡಳಿತ ನಿರ್ವಹಿಸಿದ ಕುಲಪತಿಯ ವರ್ಚಸ್ಸಿದೆ. ಶಿಕ್ಷಣವೇತ್ತರ ವೈಚಾರಿಕ ಪ್ರಗಲ್ಪತೆ ಇದೆ, ಪ್ರಾಧ್ಯಾಪಕನ ಪ್ರತಿಭೆ ಇದೆ, ಅನುಭವ ತಪಸ್ಸಿದೆ, ಅನುಭಾವ ಸಿದ್ಧಿಯಿದೆ, ಪ್ರಪಂಚ ಪಯಣಿಗನ ವಿಶಾಲ ಜ್ಞಾನವಿದೆ, ಬೌದ್ಧಿಕ ಔನ್ನತ್ಯವಿದೆ, ಸೃಜನ ಕವಿಯ ಅಂತಃಸ್ಫುರಣವಿದೆ, ಯೋಗಿಯ ನಿಷ್ಕಾಮ ಬುದ್ಧಿಯಿದೆ.
ಧಾರವಾಡದಲ್ಲಿ ಪ್ರಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಗೋಕಾಕರು ಮುಂದೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ಪರೀಕ್ಷೆಗೆ ಕುಳಿತರು. ಅವರಿಗೆ ಅಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಭರವಸೆ ಇತ್ತು. ಇನ್ನೂ ಮೌಖಿಕ ಪರೀಕ್ಷೆ ಆಗುವುದರಲ್ಲಿತ್ತು. ತತ್ಪೂರ್ವದಲ್ಲಿ ಕಾಂಟಿನೆಂಟಲ್ ಪ್ರವಾಸಕ್ಕೆಂದು ಹೊರಟರೆ ದಾರಿಯಲ್ಲಿ ಎಡಿನ್ ಬರೋದಲ್ಲಿ ತೀವ್ರತರವಾದ ಕರುಳು ಬೇನೆಯಿಂದ ಬಳಲುತ್ತಾ ಚಿಕಿತ್ಸೆಗೆ ಒಳಗಾಗಬೇಕಾಯಿತು. ವೈವಾ ತಪ್ಪಿ ಹೋಗಿ ಆಕ್ಸ್ ಫರ್ಡ್ ಪ್ರಥಮ ದರ್ಜೆಯ ಉತ್ತೀರ್ಣತೆಯ ಆಸೆ ಹುಸಿಯಾಯಿತು ಎಂದುಕೊಂಡರು. ಗೋಕಾಕರ ಲಿಖಿತ ಪರೀಕ್ಷೆಯ ಉಜ್ವಲತೆ ಎಷ್ಟು ಶ್ರೇಷ್ಠವಾಗಿತ್ತೆಂದರೆ ವೈವಾ ಪರೀಕ್ಷೆ ಇಲ್ಲದೆಯೇ ಆಕ್ಸ್ ಫರ್ಡ್ ಪರಿಣತರು ಗೋಕಾಕರನ್ನು ಶ್ರೇಷ್ಠ ದರ್ಜೆಯ ಉತ್ತೀರ್ಣತೆಗೆ ಪರಿಗಣಿಸಿದರು.