Translate in your Language

Friday, August 15, 2014

ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಅಮರವಾಗಲಿ

We Salute Sandeep Unnikrishnan
2008ರ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಇಂದಿಗೆ ಐದು ವರ್ಷ ಪೂರ್ಣಗೊಂಡಿದೆ.. ಜೊತೆಗೆ ಬೆಂಗಳೂರು ಮೂಲದ ಭಾರತದ ಹೆಮ್ಮೆಯ ಪುತ್ರ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದ ದಿನವೂ ಹೌದು.


ಜೀವದ ಹಂಗುತೊರೆದು ತಾಜ್ ಹೋಟೆಲ್ ಬಳಿ ಉಗ್ರರು ನಡೆಸಿದ್ದ ದಾಳಿಯನ್ನು ಹತ್ತಿಕ್ಕಲು ಯತ್ನಿಸಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನೆನಪು ಸದಾ ಇರುವಂತೆ ಮಾಡಲು ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ಅವರು ಬೆಂಗಳೂರಿನಲ್ಲಿ 26/11ರಂದೇ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.
ನಗರದ ಹೊರವರ್ತುಲ ರಸ್ತೆಗೆ ಹೊಂದಿಕೊಂಡಿರುವ ರಾಮಮೂರ್ತಿ ನಗರದ ಸಿಗ್ನಲ್ ಸಮೀಪ ಎನ್ ಎಸ್ ಜಿ ಕಮಾಂಡೋ ಸಂದೀಪ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ.
ರಣರಂಗದ ಹೊರಗಡೆ ಯೋಧನೊಬ್ಬ ತೋರುವ ಅಪ್ರತಿಮ ಸಾಹಸ, ಶೌರ್ಯ, ತ್ಯಾಗಕ್ಕಾಗಿ ನೀಡುವ 'ಅಶೋಕ ಚಕ್ರ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಜನವರಿ 26,2009ರಲ್ಲಿ ಸಂದೀಪ್ ಅವರಿಗೆ ಮರಣೋತ್ತರವಾಗಿ ಅಶೋಕ್ ಚಕ್ರ ನೀಡಲಾಗಿದೆ. ಸಂದೀಪ್ ಅವರ ಜೊತೆಗೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ವಿಜಯ್ ಸಲಾಸ್ಕರ್, ತುಕಾರಾಂ ಒಂಬಳೆ, ಗಜೇಂದರ್ ಸಿಂಗ್ ಅವರಿಗೂ ಮರಣೋತ್ತರ ಪ್ರಶಸ್ತಿ ಸಿಕ್ಕಿದೆ.

ಮುಂಬೈ ದಾಳಿಗೆ ಕಾರಣರಾದ ಎಲ್ಲಾ ಉಗ್ರರು ಅಂದೇ ಮೃತಪಟ್ಟಿದ್ದರು. ಸಿಕ್ಕಿ ಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ನನ್ನು ಬಂಧಿಸಲಾಗಿತ್ತು. ಕಸಬ್ ಗೆ ನ.21 ಪುಣೆಯ ಯರವಾಡ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ಕರಾಳ ನೆನಪು:2008ರ ನವೆಂಬರ್ 26ರಂದು ಪಾಕಿಸ್ತಾನದ ಹತ್ತು ಉಗ್ರರು ಭಾರತದೊಳಗೆ ಸಮುದ್ರದ ಮುಖಾಂತರ ನುಸುಳಿ 166 ಜನರನ್ನು ಹತ್ಯೆಗೈದಿದ್ದರು.
ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನಲ್ಲಿ ಇದ್ದರ ಜನರನ್ನು ಪಾರು ಮಾಡಲು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಅವರು ಹೋದಾಗ ಉಗ್ರರ ಜೊತೆ ಹೋರಾಡುತ್ತಲೇ ಮಡಿದಿದ್ದರು.
ಭಯೋತ್ಪಾದಕ ಸಿಡಿಸಿದ ಗುಂಡು ಸಂದೀಪ್ ಗುಂಡಿಗೆಯನ್ನು ಹೊಕ್ಕಿದ್ದಾಗ, "ದಯವಿಟ್ಟು ಮೇಲೆ ಯಾರೂ ಬರಬೇಡಿ, ನಾನೊಬ್ಬನೇ ಅವರನ್ನು ಎದುರಿಸುತ್ತೇನೆ" ಎಂಬ ಸಂದೇಶ ರವಾನಿಸಿದ್ದಾಗಿ ಎನ್ಎಸ್‌ಜಿ ಅಧಿಕಾರಿಗಳು ಸಂದೀಪ್ ಅವರನ್ನು ನೆನೆಸಿಕೊಳ್ಳುತ್ತಾರೆ. ತಾಜ್ ಮಹಲ್ ಪ್ಯಾಲೇಸಿನಲ್ಲಿ ಏಕಾಂಗಿಯಾಗಿ ಉಗ್ರರ ಹಿಡಿತಕ್ಕೆ ಸಿಕ್ಕು ಸಂದೀಪ್ ಹೋರಾಡುತ್ತಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು.

2008ರ ಮುಂಬಯಿ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ವೀರಮರಣವಪ್ಪಿದ್ದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅಪ್ರತೀಮ ದೇಶಭಕ್ತ ಮಾತ್ರವಲ್ಲ ಕೊಡುಗೈ ದಾನಿಯಾಗಿದ್ದ. ಸೇನೆಯಲ್ಲಿ 9 ವರ್ಷ ಉನ್ನತ ಹುದ್ದೆ ಅಲಂಕರಿಸಿದ್ದರೂ ಬಂದ ಸಂಬಳವನ್ನೆಲ್ಲ ದೀನ ದಲಿತರಿಗೆ ಹಂಚಿಬಿಡುತ್ತಿದ್ದರಂತೆ.

ಸಂದೀಪ್ ಅಪ್ಪ ನಿವೃತ್ತ ಇಸ್ರೋ ಅಧಿಕಾರಿ ಉನ್ನಿಕೃಷ್ಣನ್ ಹಾಗೂ ತಾಯಿ ಧನಲಕ್ಷ್ಮಿ ಅವರು ' ನಮಗೆ ಮಗನನ್ನು ಕಳೆದುಕೊಂಡ ದುಃಖಕ್ಕಿಂತ ವೀರಪುತ್ರನನ್ನು ನಾಡಿಗೆ ನೀಡಿದ ಹೆಮ್ಮೆಯಿದೆ ಎಂದು ಹೇಳುತ್ತಾರೆ. ಆತನ ಸಾವಿನ ನಂತರ ಯಾವುದೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ನಮಗೆ ಆಸಕ್ತಿಯಿಲ್ಲ. ಆತನ ನೆನೆಪೇ ನಮ್ಮ ಮುಂದಿನ ಜೀವನವನ್ನು ಸಾಗಿಸುತ್ತದೆ ಎನ್ನುತ್ತಾರೆ.

ಇಂತಹ ನಮ್ಮ ವೀರ ಯೋಧರಿಗೆ ನಮ್ಮ ಹೃದಯ ಪೂರ್ವಕ ನಮನಗಳನ್ನು ಸಲ್ಲಿಸೋಣ.

No comments:

Post a Comment