ಎಲ್ಲಿಯೂ ನಿಲ್ಲದಿರು
ಮನೆಯನೆಂದೂ ಕಟ್ಟದಿರು
ಕೊನೆಯನೆಂದೂ ಮುಟ್ಟದಿರು
ಓ ಅನಂತವಾಗಿರು !
ಓ ನನ್ನ ಚೇತನಾ,
ಆಗು ನೀ ಅನಿಕೇತನ !
ಸಾವಿರದ ಒಂಬೈನೂರ ನಾಲ್ಕು, ಡಿಸೆಂಬರ್, ಇಪ್ಪತ್ತೊ೦ಭತ್ತರಂದು (29-12-1904) ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ - ಕುವೆಂಪು) ಜನಿಸಿದರು.
ಅಂದರೆ, ಇಂದಿಗೆ ಸುಮಾರು ಒಂದು ನೂರಾ ಹನ್ನೆರಡು ವರ್ಷಗಳ ಹಿಂದೆ ಕ್ರೋಧಿನಾಮ ಸಂವತ್ಸರದ ಮಾರ್ಗಶೀರ್ಷ - ಬಹುಳ ಸಪ್ತಮೀ ಗುರುವಾರದ ಉತ್ತರಾ ನಕ್ಷತ್ರದಲ್ಲಿ.
ಇದೇ ದಿನ ಶ್ರೀ ಮಹಾಮಾತೆ ಶಾರದಾದೇವಿಯವರ ಜನ್ಮತಿಥಿಯೂ ಆಗಿರುವುದು ಪುಟ್ಟಪ್ಪನವರಿಗೆ ಆನಂದದ ಮತ್ತು ಹೆಮ್ಮೆಯ ವಿಷಯ. ಅವರು ಭೂಸ್ಪರ್ಶ ಮಾಡಿದ್ದು ತಮ್ಮ ತಾಯಿಯ ತವರಾದ ಹಿರಿಕೊಡಿಗೆ ಮನೆಯಲ್ಲಿ. ಹಿರಿಕೊಡಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಒಂದು ಕುಗ್ರಾಮ. ಮಲೆನಾಡಿನ ಸಹ್ಯಾದ್ರಿಯ ಮಡಿಲಲ್ಲಿರುವ ಎಲ್ಲ ಹಳ್ಳಿಗಳಂತೆಯೆ ಹಿರಿಕೊಡಿಗೆಯೂ ಒಂದೇ ಮನೆಯ ಹಳ್ಳಿ. ಅನಂತರ ``ತವರು ಮನೆ ಹಿರಿಕೊಡಿಗೆಯಿಂದ ಗಂಡನ ಮನೆ ಕುಪ್ಪಳಿಗೆ ಚೊಚ್ಚಲು ತಾಯಿಯಾಗಿ ಸೀತಮ್ಮನವರು ತೊಟ್ಟಿಲ ಕೂಸನ್ನು ಕರೆತಂದು ಮನೆವುಗಿಸಿದಂದಿನಿಂದ '' ತಂದೆಯ ಮನೆ ಕುಪ್ಪಳಿ ಪುಟ್ಟಪ್ಪನವರ ``ಮನೆ''ಯಾಯಿತು.
ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ ,
ಒಂಬತ್ತು ಮೈಲಿಗಳ ದೂರದಲಿ, ನಮ್ಮೂರು ಕುಪ್ಪಳಿ .
ಊರಲ್ಲ ನಮ್ಮ ಮನೆ. ನಮ್ಮ ಕಡೆ ಊರೆಂದರೊಂದೆ ಮನೆ.
ಕುಪ್ಪಳಿ ಮನೆ ತಮ್ಮ ತಾಯಿಯ ತವರು ಮನೆಗಿಂತ ನೆಮ್ಮದಿಯ ಬೀಡಾಗಿತ್ತು. ಕುಪ್ಪಳಿಯನ್ನು ದೊಡ್ಡಮನೆಯೆಂದೂ, ಕುಪ್ಪಳಿ ಮನೆಯವರನ್ನು ದೊಡ್ಡ ಮನೆತನದವರೆಂದೂ ಜನ ಗೌರವಿಸುತ್ತಿದ್ದರು. ಬತ್ತದ ಗದ್ದೆ, ಅಡಕೆ ತೋಟ, ಜಾನುವಾರು, ಆಳುಕಾಳು, ಪಟೇಲಿಕೆಯ ಅಧಿಕಾರ - ಹೀಗೆ ಎಲ್ಲ ವಿಧದಲ್ಲಿಯೂ ಕುಪ್ಪಳಿ ಮನೆ ಸಮೃದ್ಧವಾಗಿತ್ತು. ಕುಪ್ಪಳಿಯ ಮನೆಯ ಸುತ್ತಣ ಪರಿಸರವು ಅತ್ಯಂತ ಸಮೃದ್ಧ. ಈ ಪರಿಸರ ಕವಿಚೇತನಕ್ಕೆ, ಮಹಾಕವಿಯಾಗಲಿರುವ ಚೇತನಕ್ಕೆ, ಅದರಲ್ಲೂ ಅವರ ಬಾಲ್ಯದ ಬದುಕಿಗೆ ಉಸಿರನ್ನಿತ್ತು ಸಲಹಿದೆ.
ಕುಪ್ಪಳಿಯ ಮನೆಯ ಸುತ್ತಣ ಪರಿಸರವು ಅತ್ಯಂತ ಸಮೃದ್ಧ. ಈ ಪರಿಸರ ಕವಿಚೇತನಕ್ಕೆ, ಮಹಾಕವಿಯಾಗಲಿರುವ ಚೇತನಕ್ಕೆ, ಅದರಲ್ಲೂ ಅವರ ಬಾಲ್ಯದ ಬದುಕಿಗೆ ಉಸಿರನ್ನಿತ್ತು ಸಲಹಿದೆ.
ಕುಪ್ಪಳಿ ಪುಟ್ಟಕೋಟೆಯಂತಿರುವ ಹೆಮ್ಮನೆ. ದೊಡ್ಡ ಹೆಬ್ಬಾಗಿಲು, ದಪ್ಪವಾದ ಸುತ್ತುಗೋಡೆ, ನಾಜೋಕಿಗಿಂತ ಬಲದ ದೃಷ್ಟಿಯಲ್ಲಿ ಕಟ್ಟಿರುವ ಗೋಡೆಗಳು. ಏಕೆಂದರೆ ಕಾಡಿನಲ್ಲಿ, ಮಳೆಯಲ್ಲಿ, ಬಿರುಗಾಳಿಯಲ್ಲಿ, ಸಿಡಿಲು ಮಿಂಚುಗಳ ಆರ್ಭಟದಲ್ಲಿ ತಾಳಿ-ಬಾಳಬೇಕಾದರೆ ದಪ್ಪ ಗೋಡೆಗಳು ಅಗತ್ಯ.
ಕುಪ್ಪಳಿ ಎಂಬ ಹೆಸರು ಈ ಮನೆಗೆ ಅಥವಾ ಹಳ್ಳಿಗೆ ಹೇಗೆ ಬಂತು ಎಂಬುದಕ್ಕೆ ``ಕುಪ್ಪಳಿಸಿಕೊಂಡು ಬರಬೇಕಾಗಿದ್ದುದರಿಂದ ಆ ಮನೆಗೆ ಕುಪ್ಪಳಿ ಎಂದು ಹೆಸರು ಬಂತು ಎಂದು ಸ್ಥಳಪುರಾಣ ಹೇಳುತ್ತದೆ'' ಎಂಬುದಾಗಿ ಕುವೆಂಪು ಅವರೆ ದಾಖಲಿಸುತ್ತಾರೆ.
ಕುಪ್ಪಳಿ ಮನೆ ಮಲೆನಾಡಿನ ವನಾಲಂಕೃತ ಗಿರಿಶ್ರೇಣಿಗಳ ತೊಡೆಯ ಮೇಲೆ ಕೂತಿದೆ. ಮನೆಯಿಂದ ಪೂರ್ವದಿಕ್ಕಿಗೆ ಹತ್ತುಮಾರು ಹೋಗುವುದರೊಳಗಾಗಿ ಬೆಟ್ಟವೇರಿ ಕಾಡಿನಲ್ಲಿ ತೂರಬೇಕು. ಕುಪ್ಪಳಿ ಮನೆಗೆ ಪೂರ್ವೋತ್ತರ ದಕ್ಷಿಣ ಭಾಗಗಳಲ್ಲಿ ಭೀಮಾಕಾರದ ಪರ್ವತ ಶ್ರೇಣಿಗಳು ದಿಗಂತವನ್ನು ನಡುಬಾನಿಗೆತ್ತಿ ನಿಂತಿವೆ. ಪಶ್ಚಿಮ ಭಾಗದಲ್ಲಿಯೂ ಬೆಟ್ಟಗಳಿವೆ; ಆದರೆ ಒಂದು ಮೈಲಿಯಷ್ಟು ದೂರ. ನಡುವೆಯೇನೋ ಬೇಕಾದಷ್ಟು ಕಾಡುಗಳಿವೆ. ಕುಪ್ಪಳಿ ಮನೆಗೂ ಪೂರ್ವಾದ್ರಿಗೂ ನಡುವೆ ಅಡಕೆ ತೋಟವಿದೆ. ಅದರ ಸೆರಗಿನಲ್ಲಿಯೆ ಕುಪ್ಪಳಿ ಮನೆಯ ಕೆರೆಯಿದೆ. ಕೆರೆ ಬೆಟ್ಟದ ಬುಡದಲ್ಲಿ ಅರಣ್ಯದ ಮಡಿಲಲ್ಲಿ ಮಲಗಿದೆ. ಹೆಮ್ಮರಗಳು, ಪೊದೆಗಳು, ಬಿದಿರು ಮೆಳೆಗಳು ಅದರ ನೀರಿನ ಮೇಲೆ ಚಾಚಿಕೊಂಡಿವೆ.
ಕುಪ್ಪಳಿ ಮನೆಯ ಉಪ್ಪರಿಗೆ ಪೂರ್ವದಿಕ್ಕಿಗೆ ತೆರೆದುಕೊಂಡಿದೆ. ಉಳಿದೆಲ್ಲ ದಿಕ್ಕಿಗೂ ಗೋಡೆ, ಕಿಟಕಿಗಳಿವೆ. ಅಲ್ಲಿ ಕುಳಿತು ನೋಡಿದರೆ ಎದುರಿಗೆ ಇಳಿಜಾರಾಗಿ ಮೇಲೆದ್ದಿರುವ ಅನಂತ ನಿಬಿಡಾರಣ್ಯ ಶ್ರೇಣಿಗಳು ಸುಂದರವಾಗಿ ರಂಜಿಸುವುವು. ಮನೆಯ ಮುಂದೆಯೆ, ಅಡಕೆ ತೋಟದಾಚೆಯ ಮೊದಲುಗೊಂಡು ನಡು ಆಕಾಶದವರೆಗೆಂಬಂತೆ ಗೋಡೆ ಹಾಕಿದಂತೆ ಕಡಿದಾಗಿ ವಿಜೃಂಭಿಸಿ ಮಹೋನ್ನತವಾಗಿ ಮೇಲೆದ್ದು, ನಿತ್ಯ ಶ್ಯಾಮಲ ಅರಣ್ಯಾಚ್ಛಾದಿತವಾಗಿರುವ ಮಲೆ ಮತ್ತು ಮನೆಯ ಹಿಂಬದಿಯಿಂದಲೆ ಪ್ರಾರಂಭವಾಗಿ ವಿರಳ ಮರಪೊದೆಗಳಿಂದ ಹಕ್ಕಲು ಹಕ್ಕಲಾಗಿ ಮೇಲೇರಿ ಏರಿ ಬಂಡೆ ಮಂಡೆಯಲ್ಲಿ ಕೊನೆಗೊಂಡಿರುವ ಹಿರಿಯ ಹಾಸುಗಳಲ್ಲಿನ ಕವಿಶೈಲ! -ಇವೆರಡೂ ಕವಿ ಹೃದಯದ ಅಕ್ಕಪಕ್ಕದಲ್ಲಿರುವ ಎರಡು ಶ್ವಾಸಕೋಶಗಳಂತೆ ಅವರ ಬಾಲ್ಯದ ರಸಜೀವನದ ಬದುಕಿಗೆ ಉಸಿರನ್ನಿತ್ತು ಪೊರೆದಿವೆ. ಮುಂದೆ ಮಹಾಕವಿಯಾಗಲಿರುವ ಒಂದು ಋಷಿ ಚೇತನದ ವಿಕಾಸನಕ್ಕೆ ವಿಧಿ ಅದಕ್ಕಿಂತಲೂ ಹೆಚ್ಚು ಅರ್ಹವೂ ಅನುಕೂಲವೂ ಆದ ಭಿತ್ತಿರಂಗವನ್ನು ಕೆತ್ತಲಾರದೆಂದೇ ತೋರುತ್ತದೆ.
ಜಯ ಭಾರತ ಜನನಿಯ ತನುಜಾತೆ-ಕನ್ನಡ ನಾಡ ಗೀತೆ
ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೆ
ಜಯ ಹೇ ರಸ ಋಷಿಗಳ ಬೀಡೆ
ಭೂದೇವಿಯ ಮಕುಟದ ನವಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂದನರವತರಿಸಿದ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜನನಿಯ ಜೋಗುಳ ವೇದದ ಘೋಷ
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ
ಕಪಿಲ ಪತoಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳಧಾಮ
ಕವಿ ಕೋಗಿಲೆಗಳ ಪುಣ್ಯರಾಮ
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ತೈಲಪ ಹೊಯ್ಸಳರಾಳಿದ ನಾಡೆ
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರಗಂಗಾ
ಚೈತನ್ಯ ಪರಮಹoಸ ವಿವೇಕರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಸರ್ವಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರರಾಮ
ಕನ್ನಡ ನುಡಿ ಕುಣಿದಾಡುವ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ
ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೆ
ಜಯ ಹೇ ರಸ ಋಷಿಗಳ ಬೀಡೆ -Kannada Naadageete by K.V Puttappa
----------------------------------------------------------------------------
2-ಮುಚ್ಚು ಮರೆ ಇಲ್ಲದೆಯೇ - ಕುವೆಂಪು
Click 2 Listen sung by Raju Ananthaswamy
ಸಂಗೀತ: ಮೈಸೂರು ಅನಂತಸ್ವಾಮಿ
ಮುಚ್ಚು ಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ... ಸ್ವೀಕರಿಸು ಓ ಗುರುವೆ ಅಂತರಾತ್ಮ...........
ರವಿಗೆ ಕಾಂತಿಯನೀವ ನಿನ್ನ ಕಣ್ವೀಕ್ಷಿಸಲು ಪಾಪತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ಈ ಪರಿಯ ಸೋಂಕಿಂಗೆ ನರಕ ತಾನುಳಿಯುವುದೇ ನರಕವಾಗಿ...........
ಶಾಂತರೀತಿಯ ನಿಮ್ಮಿ ಕದಡಿರುವುದೆನ್ನಾತ್ಮ ಶಾಂತರೀತಿಯು ಅದೆಂತೊ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ ನಿನ್ನ ಬೆಳಕಿನ ಆನಂದಕೊಯ್..........
3-ಮರೆಗೆ ನಿಂತು ಕಾಯುತಿರುವ
(Marege Ninthu Kaayutiruva)
ಮರೆಗೆ ನಿಂತು ಕಾಯುತಿರುವ ಕರುಳು ಯಾವುದೋ
ಸಾವಿರ ಸೋಜಿಗವ ತೆರೆವ ಬೆರಳು ಯಾವುದೋ ||ಮರೆ||
ಸುತ್ತ ಹೊಳೆವ ಹಸಿರಲೀ
ಮತ್ತೆ ಪಕ್ಷಿ ದನಿಯಲೀ ||ಸುತ್ತ||
ಎತ್ತೆತ್ತಲೋ ಅಲೆದು ಬಂದು
ಮಳೆ ಚೆಲ್ಲುವ ಮುಗಿಲಲೀ ||ಮರೆಗೆ||
ಕಣ್ಣ ಕೊಟ್ಟು ಹಗಲಿಗೇ
ಕಪ್ಪನಿಟ್ಟು ಇರುಳಿಗೆ ||ಕಣ್ಣು||
ಇನ್ನಿಲ್ಲದ ಬಣ್ಣ ಬಳಿದು
ಚಿಟ್ಟೆಯಂತ ಮರುಳೆಗೆ ||ಮರೆಗೆ||
ಹೊರಗೆ ನಿಂತು ದುಡಿಯುವ
ಫಲ ಬಯಸದೆ ಸಲಹುವಾ ||ಹೊರಗೆ||
ತಾಯಿ ಜೀವವೇ ನಮೋ ||ತಾಯಿ||
ಕಾಯ್ವ ಕರುಣಿಯೇ ನಮೋ || -ಕುವೆಂಪು
4- ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ - ಕುವೆಂಪು
Listen to the poem Audio Link
ರಚನೆ: ಕುವೆಂಪು
ಭಾವಗೀತೆ ಸಂಕಲನ: ಭಾವ ಸಂಗಮ
ಬಾಗಿಲೊಳು ಕೈಮುಗಿದು
ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು |೨|
ಕಂಬನಿಯ ಮಾಲೆಯನು
ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ
ಅರ್ಪಿಸಿಲ್ಲಿ
ಬಾಗಿಲೊಳು ಕೈಮುಗಿದು
ಒಳಗೆ ಬಾ ಯಾತ್ರಿಕನೆ
ಗಂಟೆಗಳ ದನಿಯಿಲ್ಲ
ಜಾಗಟೆಗಳಿಲ್ಲಿಲ್ಲ |೨|
ಕರ್ಪೂರದಾರತಿಯ
ಜ್ಯೋತಿಯಿಲ್ಲ |೨|
ಭಗವಂತನಾನಂದ ರೂಪಗೊಂಡಿಹುದಿಲ್ಲಿ |೨|
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ
ಬಾಗಿಲೊಳು ಕೈಮುಗಿದು
ಒಳಗೆ ಬಾ ಯಾತ್ರಿಕನೆ
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವು ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ |೨|
5- ಬಾ ಇಲ್ಲಿ ಸಂಭವಿಸು - ಕುವೆಂಪು
Listen to the poem Audio Link
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ
ಮಣ್ಣಾಗಿ ಮರವಾಗಿ ಮಿಗವಾಗಿ ಕಗವಾಗೀ...
ಮಣ್ಣಾಗಿ ಮರವಾಗಿ ಮಿಗವಾಗಿ ಕಗವಾಗಿ
ಭವ ಭವದಿ ಭತಿಸಿಹೇ ಭವತಿ ದೂರ
ನಿತ್ಯವೂ ಅವತರಿಪ ಸತ್ಯಾವತಾರ || ಬಾ ಇಲ್ಲಿ ||
ಮಣ್ಣ್ ತನಕೆ ಮರತನಕೆ ಮಿಗತನಕೆ ಕಗತನಕೇ..
ಮಣ್ಣ್ ತನಕೆ ಮರತನಕೆ ಮಿಗತನಕೆ ಕಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರ
ಮೂಡಿ ಬಂದೆನ್ನ ನರ ರೂಪ ಚೇತನದೀ
ಮೂಡಿ ಬಂದೆನ್ನ ನರ ರೂಪ ಚೇತನದೀ
ನಾರಯಣ ಪತ್ತೆ ದಾರಿ ದೂರ
ನಿತ್ಯವೂ ಅವತರಿಪ ಸತ್ಯಾವತಾರ || ಬಾ ಇಲ್ಲಿ ||
ಅಂದು ಅರಮನೆಯಲ್ಲಿ ಮತ್ತೆ ಸೆರೆಮನೆಯಲ್ಲಿ
ಅಲ್ಲಿ ಗೂಡುಕಟ್ಟಿಯಲಿ ಇಲ್ಲಿ ಕಿರುಗುಡಿಸಲಲಿ
ಅಂದು ಅರಮನೆಯಲ್ಲಿ ಮತ್ತೆ ಸೆರೆಮನೆಯಲ್ಲಿ
ಅಲ್ಲಿ ಗೂಡುಕಟ್ಟಿಯಲಿ ಇಲ್ಲಿ ಕಿರುಗುಡಿಸಲಲಿ
ದೇಶ ದೇಶ ವಿದೇಶ ವೇಷಾಂತರವನಾಂತು
ವಿಶ್ವ ಸಾರಥಿಯಾಗಿ ನೀಯಾರದವನೆಂದು
ಛೋದಿಸಿರುವೆಯೊ ಅಂತರ್ಶುದ್ಧಿ ಲೋಲಾ...
ಅವತರಿಸು ಬಾ...
ಅವತರಿಸು ಬಾ...
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ರದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ
6-ಕನ್ನಡ ಎನೆ ಕುಣಿದಾಡುವುದೆನ್ನದೆ - ಕುವೆಂಪು
Listen to the poem Audio Link
ಕನ್ನಡ ಎನೆ ಕುಣಿದಾಡುವುದೆನ್ನದೆ
ಕನ್ನಡ ಎನೆ ಕಿವಿನಿಮಿರುವುದು |
ಕಾಮನಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು |
ಕನ್ನಡ ಕನ್ನಡ ಹಾ ಸವಿಗನ್ನಡ
ಬಾಳುವುದೇತಕೆ ನುಡಿ ಎಲೆ ಜೀವ |
ಸಿರಿಗನ್ನಡದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ |
ಕನ್ನಡತಾಯಿಯ ಸೇವೆಯ ಮಾಡೆ |
7-ಬಾರಿಸು ಕನ್ನಡ ಡಿಂಡಿಮವ - ಕುವೆಂಪು
Listen to the poem Audio Link
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
8- ನೇಗಿಲ ಹಿಡಿದ Listen to the poem Audio Link
ಚಿತ್ರ - ಕಾಮನಬಿಲ್ಲು
ಸಾಹಿತ್ಯ - ಕುವೆಂಪು
ಸಂಗೀತ - ಉಪೇಂದ್ರಕುಮಾರ್
ಧ್ವನಿ - ಸಿ. ಅಶ್ವಥ್
ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗೀ
ಉಳುವಾ ಯೋಗಿಯ ನೋಡಲ್ಲಿ ||
ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||
ಉಳುವಾ ಯೋಗಿಯ ನೋಡಲ್ಲಿ ||
ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||
ಉಳುವಾ ಯೋಗಿಯ ನೋಡಲ್ಲಿ ||
9- ತನುವು ನಿನ್ನದು ಮನವು ನಿನ್ನದು
Listen to the poem Audio Link
ರಚನೆ : ಕುವೆಂಪು
ಸಂಗೀತ ಮತ್ತು ಗಾಯನ : ಮೈಸೂರು ಅನಂತಸ್ವಾಮಿ
ಆಲ್ಬಂ : ಭಾವಸಂಗಮ
ತನುವು ನಿನ್ನದು ಮನವು ನಿನ್ನದು, ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಮ್ಬ ಹೆಮ್ಮೆಯ, ಋಣವು ಮಾತ್ರವೆ ನನ್ನದು
ನೀನು ಹೊಳೆದರೆ ನಾನು ಹೊಳೆವೆನು,
ನೀನು ಬೆಳೆದರೆ ನಾನು ಬೆಳೆವೆನು
ನೀನು ಹೊಳೆದರೆ ನಾನು ಹೊಳೆವೆನು,
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು,
ನನ್ನ ಮರಣದ ಮರಣವು
ನನ್ನ ಮರಣದ ಮರಣವು
||ತನುವು ನಿನ್ನದು||
ನನ್ನ ಮನದಲಿ ನೀನು ಯುಕ್ತಿ,
ನನ್ನ ಹ್ರಿದಯದಿ ನೀನೆ ಭಕ್ತಿ
ನನ್ನ ಮನದಲಿ ನೀನು ಯುಕ್ತಿ,
ನನ್ನ ಹ್ರಿದಯದಿ ನೀನೆ ಭಕ್ತಿ
ನೀನೆ ಮಾಯ ಮೋಹ ಶಕ್ತಿಯು,
ನನ್ನ ಜೀವನ ಮುಕ್ತಿಯು
ನನ್ನ ಜೀವನ ಮುಕ್ತಿಯು
||ತನುವು ನಿನ್ನದು||
----------------------
Elladaru Iru enthadaru Iru endendigu nee Kannada vaagiru
No comments:
Post a Comment