Translate in your Language

Wednesday, August 20, 2014

ಎಂ. ಪಿ. ಶಂಕರ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: 20 ಆಗಸ್ಟ್,  1935 ನಿಧನ: 17 ಜುಲೈ 2008
ಅಗಾಧ ಮೈಕಟ್ಟಿನ ಅಜಾನುಬಾಹು ಎಂ. ಪಿ. ಶಂಕರ್ ಕನ್ನಡ ಚಿತ್ರರಂಗದ ಚಿರಸ್ಮರಣೀಯ ಕಲಾವಿದರಲ್ಲಿ ಒಬ್ಬರು. ‘ನಾರದ ವಿಜಯ’ ಎಂಬ ಚಿತ್ರದಲ್ಲಿ ‘ಮಾಂಸಪರ್ವತ’ (ಗುರ್ರ್ ಪಾದ)ಎಂದು ನಾರದ ಪಾತ್ರಧಾರಿಯಾದ ಅನಂತ್ ನಾಗ್ ಅವರಿಂದ ಕರೆಯಲ್ಪಟ್ಟ ಈ ಚಿತ್ರರಂಗದ ಅವಿಸ್ಮರಣೀಯ ಪಾತ್ರಧಾರಿ, ಪ್ರತಿಭೆ ಮತ್ತು ಸಾಧನೆಗಳ ಪರ್ವತವೂ ಹೌದು. ಈ ಮೈಸೂರು ಪುಟ್ಟಲಿಂಗಪ್ಪ ಶಂಕರ್ ಅವರು ಜನಿಸಿದ್ದು ಆಗಸ್ಟ್ 20, 1935ರಲ್ಲಿ. 

ಕುಸ್ತಿ ಪೈಲ್ವಾನರಂತಿದ್ದ ಎಂ. ಪಿ. ಶಂಕರ್ ಅವರು ನಿಜಕ್ಕೂ ಪೈಲ್ವಾನರಾಗಿ ಸಾಧನೆ ಮೆರೆದು ಮೈಸೂರು ದಸರಾ ಸ್ಪರ್ಧೆಗಳಲ್ಲಿ ಹಲವಾರು ಸ್ಪರ್ಧೆಗಳನ್ನು ಗೆದ್ದಿದ್ದವರು. ‘ರತ್ನಮಂಜರಿ’ ಚಿತ್ರದಿಂದ ಪ್ರಾರಂಭಗೊಂಡ ಎಂ. ಪಿ. ಶಂಕರ್ ಅವರ ಚಿತ್ರ ಜೀವನದಲ್ಲಿ ಅವರು ಹೆಚ್ಚು ನಿರ್ವಹಿಸಿದ್ದು ಖಳನಾಯಕ ಪಾತ್ರಗಳನ್ನೇ. ಎಂ. ಪಿ. ಶಂಕರ್ ಅವರ ಪ್ರತಿಭಾ ಸಾಮರ್ಥ್ಯವನ್ನೂ, ಅವರಿಗೆ ಕುಸ್ತಿಯಲ್ಲಿ ಇದ್ದ ಹುರುಪುಗಳನ್ನು ಅರಿತಿದ್ದ ಪುಟ್ಟಣ್ಣ ಕಣಗಾಲರು ಅವರಿಗೆ ತಮ್ಮ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ ‘ನಾಗರಹಾವು’ದಲ್ಲಿ ಕುಸ್ತಿ ಗರಡಿಯ ಮುಖ್ಯಸ್ಥರ ಪಾತ್ರವನ್ನು ಕೊಟ್ಟಿದ್ದರು. “ನಾಷ್ಟಾ ಮಾಡಿರುವ ಮುಖ ನೋಡು ಅಂತ ವಿಷ್ಣುವರ್ಧನ್ ಅವರಿಗೆ ಒಂದು ರಾಶಿ ದೋಸೆ ಮತ್ತು ಅದರ ಮೇಲೆ ದೊಡ್ಡ ಬೆಣ್ಣೆಯ ಗುಡ್ಡೆಯನ್ನು ಇಟ್ಟು ಚೆನ್ನಾಗಿ ತಿನ್ನು, ಕುಸ್ತಿ ಮಾಡೋನು ಚೆನ್ನಾಗಿ ತಿನ್ಬೇಕು” ಎಂದು ನುಡಿದ ಚಿತ್ರದುರ್ಗದ ನಾಯಕನೇ ತಾನಾಗಿ ಮೂರ್ತಿವೆತ್ತ ಆ ಪಾತ್ರವನ್ನು ಜನ ಹೇಗೆ ತಾನೇ ಮರೆತಾರು.

ಕನ್ನಡ ಚಿತ್ರರಂಗದ ಅವಿಸ್ಮರಣೀಯ ಚಿತ್ರಗಳಲ್ಲಿ ಪ್ರಮುಖವಾಗಿ ಕಣ್ಮುಂದೆ ಬಂದು ನಿಲ್ಲುವ ಚಿತ್ರ ಹುಣಸೂರು ಕೃಷ್ಣಮೂರ್ತಿಗಳ ‘ಸತ್ಯಹರಿಶ್ಚಂದ್ರ’. ಆ ಚಿತ್ರದಲ್ಲಿ ಎಲ್ಲವೂ, ಎಲ್ಲ ಪಾತ್ರಗಳೂ ಸೊಗಸಿನವೇ. ಆದರೂ ಅವೆಲ್ಲವನ್ನೂ ಮೀರಿ ನಮ್ಮ ಕಣ್ಮುಂದೆ ಬಂದು ನಿಲ್ಲುವುದು ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ’ ಎಂಬ ಹಾಡು ಮತ್ತು ಆ ಹಾಡಿಗೆ ವೀರಬಾಹುವಾಗಿ ಕುಣಿದ ಎಂ. ಪಿ. ಶಂಕರ್. ಸತ್ಯ ಹರಿಶ್ಚಂದ್ರನ ಕಾಲದ ವೀರಬಾಹು ಹೇಗಿದ್ದನೋ, ಆದರೆ ಕನ್ನಡ ಚಿತ್ರರಂಗದ ಅವಿಸ್ಮರಣೀಯ ಎಂ. ಪಿ. ಶಂಕರ್ ಮತ್ತು ಆತ ಹಾಡಿ ಕುಣಿದ ‘ಕುಲದಲ್ಲಿ ಕೀಳ್ಯಾವುದೋ’ ಮತ್ತು ‘ನನ್ನ ನೀನು ನಿನ್ನ ನಾನು ಹಾಡಿನಲ್ಲಿ’ ಬತ್ತೀನಿ, ಬತ್ತೀನಿ ಎಂದು ಪೂತ್ಕರಿಸುತ್ತಾ, ‘ವೀರದಾಸ’ ಎಂಗೈತೆ ಎಂದು ಎಂ. ಪಿ. ಶಂಕರ್ ಕೇಳಿದ್ದು, ಅವರ ಕಾಲು ಒತ್ತುತ್ತಿದ್ದ ವೀರದಾಸನಾಗಿದ್ದ ಹರಿಶ್ಚಂದ್ರ ಪಾತ್ರಧಾರಿ ರಾಜ್ ಕುಮಾರ್ ‘ನಾನು ನೋಡ್ಲಿಲ್ಲ ಮಹಾಸ್ವಾಮಿ ನಾನು ನಿಮ್ಮ ಸೇವೆಯಲ್ಲಿ ನಿರತನಾಗಿದ್ದೆ’ ಎಂದು ನುಡಿದ ತಾದ್ಯಾತ್ಮ ಮರೆಯಲಾಗದ್ದು. 

ಎಂ. ಪಿ. ಶಂಕರ್ ಅವರ ನೆನಪಿನಲ್ಲಿ ಮೂಡಿ ಬರುವ ಮತ್ತೊಂದು ಭವ್ಯತೆಯ ಮೇರು ಶಿಖರ ಕನ್ನಡ ಚಿತ್ರರಂಗದ ಉತ್ಕೃಷ್ಟ ಚಿತ್ರಗಳ ಸಾಲಿನಲ್ಲಿ ಎಂದೆಂದೂ ರಾರಾಜಿಸುವ ‘ಭೂತಯ್ಯನ ಮಗ ಅಯ್ಯು’ ಚಿತ್ರದ ಭೂತಯ್ಯನ ಪಾತ್ರ. ಚಿತ್ರವನ್ನು ನೋಡಲು ಕನ್ನಡದ ಹಿರಿಯಣ್ಣ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜೊತೆ ಆಗಮಿಸಿದ ‘ಭೂತಯ್ಯನ ಮಗ ಅಯ್ಯು’ ಕಥೆಯ ಲೇಖಕರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು, ‘ಭೂತಯ್ಯ’ ಪಾತ್ರಧಾರಿ ಎಂ. ಪಿ. ಶಂಕರ್ ಅವರ ಬಳಿ ಬಂದು, ಇದುವರೆಗೆ ‘ಭೂತಯ್ಯ’ ನನ್ನವನಾಗಿದ್ದ ಇನ್ನು ಮುಂದೆ ಆತ ನಿನಗೆ ಸೇರಿದವನು ಎಂದು ಬೆನ್ನು ತಟ್ಟಿದರಂತೆ. ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಶ್ರೇಷ್ಠ ಪಾತ್ರ ನಿರ್ವಹಣೆಗಳಲ್ಲಿ ಖಂಡಿತವಾಗಿಯೂ ಭೂತಯ್ಯ ಪಾತ್ರ ಕೂಡಾ ಒಂದು.

ಎಂ. ಪಿ. ಶಂಕರ್ ಅವರ ಸಾಧನೆ ಮೇಲ್ಕಂಡ ಕೆಲವು ಪಾತ್ರಗಳು, ಅವರು ಖಳರಾಗಿ ಮತ್ತು ವಯಸ್ಸಾದ ನಂತರದಲ್ಲಿ ನಟಿಸಿದ ಪೋಷಕಪಾತ್ರಗಳಲ್ಲಿ ನಿಂತು ಹೋಗುವುದಿಲ್ಲ. ನಿರ್ಮಾಪಕರಾಗಿ ಅವರು ನೀಡಿದ ಕಾಡಿನ ಬಗೆಗೆ ಪ್ರೀತಿ ಹುಟ್ಟಿಸುವ ಚಿತ್ರಗಳಿಂದಲೂ ಅವರು ಚಿರಸ್ಮರಣೀಯರು. ಅದರಲ್ಲೂ ಡಾ. ರಾಜ್ ಕುಮಾರ್ ಅವರಿಗೆ ಕೀರ್ತಿ ತಂದು ಕೊಟ್ಟ ಪ್ರಸಿದ್ಧ ಚಿತ್ರ ‘ಗಂಧದಗುಡಿ’. ಆ ಚಿತ್ರದಲ್ಲಿ ಅವರು ಹತ್ತಿ ವಿಜ್ರಂಭಿಸಿದ ಎಂ. ಪಿ. ಶಂಕರ್ ಸ್ವಯಂ ಕಾಪಾಡಿಕೊಂಡಿದ್ದ ಬಿಳಿಕುದುರೆ ಮತ್ತು ನಾವಾಡುವ ನುಡಿಯೇ ಕನ್ನಡ ನುಡಿ ಹಾಡು ಇವೆಲ್ಲಾ ಎಂ. ಪಿ. ಶಂಕರ್ ಅವರ ನೆನಪನ್ನು ಕನ್ನಡ ನಾಡಿನಲ್ಲಿ ಶಾಶ್ವತವಾಗಿ ಉಳಿಸುವಂತದ್ದಾಗಿದೆ. ಕಾಡಿನ ರಹಸ್ಯ, ಬೆಟ್ಟದ ಹುಲಿ, ನ್ಯಾಯವೇ ದೇವರು, ಬಂಗಾರದ ಮನುಷ್ಯ, ದೂರದ ಬೆಟ್ಟ, ವಸಂತ ಲಕ್ಷ್ಮಿ, ಬಿಳಿಗಿರಿಯ ಬನದಲಿ ಮುಂತಾದ ಹಲವಾರು ಚಿತ್ರಗಳು ಸಹಾ ಎಂ. ಪಿ. ಶಂಕರ್ ಅವರನ್ನು ನೆನೆಯುವಂತೆ ಮಾಡುತ್ತವೆ. 

ಹಲವಾರು ಪರಿಸರ ಮತ್ತು ಕಾಡು ಪ್ರಾಣಿಗಳ ಮೇಲೆ ಚಲನ ಚಿತ್ರಗಳನ್ನು (ಗಂಧದ ಗುಡಿ, ಜಯಸಿಂಹ, ರಾಮ ಲಕ್ಸ್ಮಣ, ಇತ್ಯಾದಿ) ನಿರ್ಮಿಸಿ, ಚಿತ್ರದ ನಾಯಕ ನಟರಿಂದ ಹುಲಿ-ಸಿಂಹ-ಆನೆ ಮುಂತಾದ ಕಾಡು ಪ್ರಾಣಿಗಳನ್ನು ಪ್ರೀತಿಸುವುದನ್ನು ಹೇಳಿಸಿದ ಕೀರ್ತಿ ಎಂ.ಪಿ. ಶಂಕರ್ ಅವರಿಗೆ ಸಲ್ಲುತ್ತದೆ,   ಕೆಲವೊಂದನ್ನು ನಿರ್ದೇಶಿಸಿ, ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಅವಿಸ್ಮರಣೀಯರಾಗಿದ್ದ ಎಂ. ಪಿ. ಶಂಕರ್ ಅತ್ಯಂತ ಸರಳ ಜೀವಿ, ಸಜ್ಜನ ವ್ಯಕ್ತಿ. ಅವರಿಗೂ ಗಾಂಧೀನಗರದ ಬಣ್ಣ ಬಣ್ಣದ ಜೀವನಕ್ಕೂ ಬಹುದೂರ. ಅವರು ಹೆಚ್ಚಿಗೆ ತಮ್ಮ ಬದುಕಿನ ಗಳಿಗೆಗಳನ್ನು ಕಳೆದದ್ದು ಮೈಸೂರಿನಲ್ಲಿ.

ಮೈಸೂರಿನ ವಿದ್ಯುಚ್ಚಕ್ತಿ ಕಚೇರಿಯಲ್ಲಿ ದಿನಗೂಲಿ ಕಾರ್ಮಿಕನಾಗಿ, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿದ್ದ ಒಬ್ಬ ಪೈಲ್ವಾನ ಮುಂದೆ ಕನ್ನಡದಲ್ಲಿ ಉಳಿಸಿಹೋದ ಕೀರ್ತಿ ಮರೆಯಲಾಗದ್ದು. ಎಂ. ಪಿ. ಶಂಕರ್ 2008ರ ವರ್ಷದಲ್ಲಿ ಈ ಲೋಕದಿಂದ ಕಣ್ಮರೆಯಾದರು. ಆದರೆ ಅವರು ತಮ್ಮ ಪಾತ್ರಗಳಲ್ಲಿ ಮೆರೆದ ಅಗಾಧತೆಯನ್ನೂ, ಅವರ ಪರಿಸರ ಪ್ರೇಮವನ್ನೂ ಮತ್ತು ಅವರು ತಮ್ಮ ನಡೆ ನುಡಿಗಳಿಂದ ಬದುಕಿನಲ್ಲಿ ಉಳಿಸಿ ಹೋದ ಸಜ್ಜನತೆಯನ್ನು ಕನ್ನಡದ ಜನತೆ ಮರೆತಿಲ್ಲ. ಈ ಮಹಾನ್ ಚೇತನಕ್ಕೆ ನಮ್ಮ ನಮನ.
Watch

No comments:

Post a Comment