‘ಹಂಸಲೇಖ’ರು ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ. ಹಂಸಲೇಖ ಅವರು ಜೂನ್ 23, 1951ರ ವರ್ಷದಲ್ಲಿ ಗೋವಿಂದರಾಜು ಗಂಗರಾಜುವಾಗಿ ಮೈಸೂರಿನಲ್ಲಿ ಜನಿಸಿದರು.
‘ತ್ರಿವೇಣಿ’ ಚಿತ್ರದಲ್ಲಿ ಬರವಣಿಗೆಯ ಮೂಲಕ ಚಿತ್ರರಂಗಕ್ಕೆ ಬಂದ ಹಂಸಲೇಖರು ಮುಂದೆ ಒಂದೆರಡು ಪುಟ್ಟ ಕೆಲಸಗಳನ್ನು ಅಲ್ಲಿ ಇಲ್ಲಿ ಮಾಡಿದ್ದರೂ ಅವರು ಪ್ರಖ್ಯಾತರಾದದ್ದು ‘ಪ್ರೇಮಲೋಕ’ ಚಿತ್ರದಲ್ಲಿ. 'ನೀನಾ ಭಗವಂತ, ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ' ಎಂಬಂತಹ ಸಾಹಿತ್ಯದಿಂದ ಅಲ್ಲಲ್ಲಿ ಮಿಂಚಿದ್ದವರು. ಕನ್ನಡದ ಪ್ರಸಿದ್ಧ ನಿರ್ಮಾಪಕರಾದ ಎನ್. ವೀರಸ್ವಾಮಿಯವರ ಪುತ್ರ ಚಿನಕುರಳಿ ವ್ಯಕ್ತಿತ್ವದ ರವಿಚಂದ್ರನ್ ಆಗ ತಾನೇ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಇಂತಹ ಪ್ರಯತ್ನದಲ್ಲಿ ಅವರಿಗೆ ‘ಗ್ರೀಸ್ 2’ ಪ್ರೇರಣೆಯಿಂದ ಕನ್ನಡದಲ್ಲೊಂದು ಹಾಡುಗಳ ಮೂಲಕ ನಡೆಯುವ ಪ್ರೇಮಕತೆಯನ್ನು ಹೇಳುವ ಆಶಯದಲ್ಲಿದ್ದಾಗ ‘ಹಂಸಲೇಖ’ರು ಅವರಿಗೆ ಜೊತೆಯಾದರು. 'ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೆ' ಎಂಬ ಹಾಡಿನ ಧ್ವನಿಮುದ್ರಣದ ಸಮಯದಲ್ಲಿ ಅಲ್ಲಿದ್ದ ಹಂಸಲೇಖರು ಆ ಹಾಡಿನ ವಿಸ್ತರಣೆಯಾದ 'ಯಾರೇ, ಯಾರೇ..' ಎಂಬ ಸಲಹೆ ಕೊಟ್ಟಾಗ ಅವರು ರವಿಚಂದ್ರನ್ ಅವರಿಗೆ ಪ್ರಿಯರಾಗಿಬಿಟ್ಟರು.
‘ಪ್ರೇಮಲೋಕ’ ಕನ್ನಡದಲ್ಲಿ ಮೂಡಿಸಿದ ಅಲೆ ಅವಿಸ್ಮರಣೀಯವಾದದ್ದು. ‘ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು’, ‘ಗಂಗೂ ನೀ ಬೈಕು ಕಲಿಸಿಕೊಡು ನಂಗೂ’, ‘ಗೆಳೆಯರೆ ನನ್ನ ಗೆಳತಿಯರೇ’, ‘ನೆಲ ನೋಡುಕೊತ ಹೋಗ್ಬೇಕು ನೆಲ ನೋಡುಕೊತ ಬರ್ಬೇಕು’, ‘ನೀನಾ ಶಕುಂತಲಾ ಅಲ್ಲಾ ನಾನ್ ಶಶಿಕಲ’ ಅಂತಹ ಮುದ ನೀಡುವ ಹಾಸ್ಯಪೂರ್ಣ ಆಡು ಪದಗಳ ಪೋಷಣೆಯ ಹಾಡುಗಳ ಜೊತೆಗೆ ‘ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ’ ಎಂಬತಕ್ಕಂತಹ ಸುಮಧುರ ಸವಿಯನ್ನೂ ಹಂಸಲೇಖ ಸೊಗಸಾಗಿ ಬಡಿಸಿದ್ದರು. ಮುಂದೆ ರವಿಚಂದ್ರನ್ ಅವರ ಚಿತ್ರಗಳಲ್ಲಿ ‘ವಾರೆ ವಾ ಈ ಕಾಫಿ ಕುಡಿಯೋಕ್ ಬೊಂಬಾಟಾಗಿದೆ, ಕಾಫಿ ಮಾಡೋ ಹುಡುಗೀ ಕೂಡಾ ಬೊಂಬಾಟಾಗಿದೆ’, ‘ಏನ್ ಹುಡ್ಗೀರೋ ಯಾಕಿಂಗ್ ಆಡ್ತೀರೋ ಲವ್ವು ಲವ್ವು ಲವ್ವು ಅಂತ ಕಣ್ಣೀರಿಡ್ತೀರೋ’ ಮುಂತಾದ ಹಾಡುಗಳಲ್ಲಿ ಹಂಸಲೇಖರ ದಿಗ್ವಿಜಯ ಇನ್ನಿಲ್ಲದಂತೆ ಸಾಗಿದರೂ ಇಂತಹ ಸಂಗೀತ ಎಷ್ಟು ದಿನ ಬಾಳಬಲ್ಲದು ಎಂಬಂತಹ ಪ್ರಶ್ನಾರ್ತಕ ಚಿನ್ಹೆಗಳನ್ನು ಮೂಡಿಸಿದ್ದು ಕೂಡಾ ಅಷ್ಟೇ ನಿಜ.
ಆದರೆ ಹಂಸಲೇಖ ಮುಂದೆ ವಿವಿಧ ವೈವಿಧ್ಯಮಯ ಸಂಗೀತದ ಅಲೆಗಳನ್ನು ಅಷ್ಟೇ ಸೊಗಸಾಗಿ ಸೃಷ್ಟಿಸಿದರು. ‘ಮುತ್ತಿನ ಹಾರ’, ‘ಹಾಲುಂಡ ತವರು’, ‘ಬಣ್ಣದ ಗೆಜ್ಜೆ’, ‘ಆಕಸ್ಮಿಕ’, ‘ಬೆಳ್ಳಿ ಕಾಲುಂಗರ’, ‘ಚೈತ್ರದ ಪ್ರೇಮಾಂಜಲಿ’ ಅಂತಹ ಚಿತ್ರಗಳಲ್ಲಿ ಹಂಸಲೇಖರು ಮೂಡಿಸಿದ ಸೊಗಸಿನ ಸಂಗೀತ ಅವರ ಪ್ರತಿಭೆಯ ಬಗೆಗಿನ ಎಲ್ಲಾ ಸಂದೇಹಾತ್ಮಕ ಪ್ರಶ್ನೆಗಳಿಗೂ ಪೂರ್ಣ ತೆರೆಯೆಳೆದವು. ಕಳೆದ ಮೂರು ದಶಕಗಳಲ್ಲಿ ಕನ್ನಡದ ನಿರಂತರ ಬೇಡಿಕೆಯಲ್ಲಿರುವ ಅಗ್ರಗಣ್ಯ ಚಿತ್ರಸಂಗೀತ ನಿರ್ದೇಶಕರಾಗಿಯೂ ಜೊತೆಗೆ ಅಲ್ಲಲ್ಲಿ ಹಾಡುಗಳ ರಚನೆ, ಚಿತ್ರಸಾಹಿತ್ಯ ಮತ್ತು ಸಂಭಾಷಣೆಗಳನ್ನೂ ಮಾಡುತ್ತಿರುವ ಹಂಸಲೇಖರು ಕನ್ನಡ ಚಿತ್ರರಂಗದ ಹೊರತಾಗಿ ಕೂಡಾ ಇತರ ಭಾಷೆಗಳಲ್ಲಿಯೂ ಬೇಡಿಕೆ ಪಡೆದವರು.
ಹಂಸಲೇಖರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಶ್ರೇಷ್ಠ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರಪಶಸ್ತಿ ಪಡೆದು ಕನ್ನಡ ಚಿತ್ರರಂಗಕ್ಕೆ ಹೊಸಪ್ರತಿಷ್ಟೆಯನ್ನು ತಂದುಕೊಟ್ಟಿತು. ಆ ಚಿತ್ರದಲ್ಲಿ ಬಿಂಬಿತವಾಗಿರುವ ಸಂಗೀತದ ವೈವಿಧ್ಯಮಯ ಅಭಿವ್ಯಕ್ತಿಯ ಹಿರಿಮೆಯಂತೂ ಎಲ್ಲಾ ಪ್ರಶಸ್ತಿಗಳಿಗೂ ಮಿಗಿಲಾದದ್ದು. ಇಂತದೊಂದು ಚಿತ್ರಸಂಗೀತ ನಮ್ಮ ಕನ್ನಡ ಚಿತ್ರರಂಗದಲ್ಲೂ ಇದೆ ಎಂದು ಹೆಮ್ಮೆ ಹುಟ್ಟಿಸುವಂತದ್ದು.
ಹಂಸಲೇಖ ಸಂಗೀತ ಕಲಿಯಲಿಚ್ಚಿಸುವವರಿಗಾಗಿ ಒಂದು ವಿಶ್ವವಿದ್ಯಾಲಯವನ್ನೇ ತೆರೆದಿದ್ದಾರೆ. ಅನೇಕ ಪ್ರತಿಭೆಗಳನ್ನು ತಯಾರು ಮಾಡುತ್ತಿದ್ದಾರೆ.
ಹೀಗೆ ತಮ್ಮ ವಿವಿಧ ಪ್ರತಿಭೆಗಳಿಂದ ಕನ್ನಡ ಚಿತ್ರರಂಗಕ್ಕೆ ಹಿರಿಮೆ ತಂದವರು ಹಂಸಲೇಖ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಳೆಯ ಮಾಧುರ್ಯವೇಕೋ ಕೇಳಿಬರುತ್ತಿಲ್ಲ ಎಂಬ ಕೂಗು ಹಂಸಲೇಖರಂತಹ ಪ್ರತಿಭಾನ್ವಿತರಿಂದ ನಿರಂತರವಾಗಿ ನೀಗುತ್ತಿರಲಿ ಎಂದು ಆಶಿಸುತ್ತಾ ಅವರ ಬದುಕಿನಲ್ಲಿ ಸುಂದರ ವಸಂತಗಳು ತುಂಬಿ ತುಳುಕುತ್ತಿರಲಿ ಎಂಬುದು ನಮ್ಮ ಆತ್ಮೀಯ ಹಾರೈಕೆ.
No comments:
Post a Comment