ಇಡೀ ದೇಶವೆಲ್ಲಾ ಹಲವು ಭ್ರಷ್ಟತೆಗಳಿಂದ ನಾರುತ್ತಿರುವ ಸಮಯದಲ್ಲಿ ಅದರ ವಿರುದ್ಧ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಒಂದು ಅಪೂರ್ವ ಕಮಲ ಅಣ್ಣಾ ಹಜಾರೆ. ಇಂದು ಅವರ ಹುಟ್ಟು ಹಬ್ಬ. ಅವರು ಜನಿಸಿದ ದಿನ ಜೂನ್ 15, 1938.
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿ ಎಲ್ಲಾ ಸಿದ್ಧಿಗಳಿಂದ ವಂಚಿತವಾಗಿ ಬರಡುಭೂಮಿಯಾಗಿ ಕ್ಷಾಮರೋಗಗಳಿಗೆ ಸುಲಭದ ತುತ್ತಾಗಿ ಕುಡಿತ, ಕಡುಬಡತನ ಮತ್ತು ಪಟ್ಟಣಗಳಿಗೆ ವಲಸೆ ಹೋಗಲು ಕಾರಣೀಭೂತವಾದ ಆಗರವಾಗಿತ್ತು. ಅಣ್ಣಾ ಹಜಾರೆಯವರ ಪ್ರೇರಣೆಗಳಿಂದ ಈ ಊರು ನೈಸರ್ಗಿಕವಾಗಿ ಜಲಸಂರಕ್ಷಣೆಯ ವಿಧಾನಗಳನ್ನು ಕಲಿತುಕೊಂಡು ಹಳ್ಳಿಗರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರ ಜೊತೆಗೆ ‘ರಾಲೆಗನ್ ಸಿದ್ಧಿ’ ಎಂಬ ಹೆಸರನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದೆ. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಅಂದರೆ ಏನು ಎಂಬುದಕ್ಕೆ ಅಣ್ಣಾ ಹಜಾರೆ, ನಮ್ಮ ಹೆಗ್ಗೋಡಿನ ಸುಬ್ಬಣ್ಣ, ಆನಂದವನದ ಬಾಬಾ ಅಮ್ಟೆ, ಬಿಳಿಗಿರಿರಂಗನ ಬೆಟ್ಟದ ಸುದರ್ಶನ್ ಅವರನ್ನು ನೋಡಿ ನಾವು ಅದರಲ್ಲೂ ನಮ್ಮ ರಾಜಕೀಯ, ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ತಜ್ಞರು ಕಲಿಯುವುದು ತುಂಬಾ ತುಂಬಾ ಇದೆ. ‘ರಾಲೇಗನ್ ಸಿದ್ಧಿ’ಯ ಸಿದ್ಧಿ ಪ್ರವರಗಳನ್ನು ಮತ್ತು ಅದು ಸಾಧಿಸಿರುವ ಶ್ರೇಷ್ಠತೆಗಳನ್ನು ಇಡೀ ವಿಶ್ವವೇ ಕಂಡು ಬೆರಗುಗೊಂಡಿರುವುದು ಅಣ್ಣಾ ಹಜಾರೆ ಅವರ ಆತ್ಮವನ್ನು ಅರಿಯಬಲ್ಲವರಿಗೆ ಪ್ರಥಮ ಹೆಜ್ಜೆಯಾಗಬೇಕಾಗುತ್ತದೆ.
ಹಲವು ಯುದ್ಧಗಳಲ್ಲಿ ಭಾರತದ ವೀರಯೋಧನಾಗಿ ಪಾಲ್ಗೊಂಡ ಅಣ್ಣಾ ಹಜಾರೆ ಅವರಿಗೆ, ಒಂದು ದಿನ ಯುದ್ಧದಲ್ಲಿ ಅವರ ತಲೆಯ ಮೇಲೇ ಹಾದು ಹೋದ ಶತ್ರುಸೈನಿಕರ ಗುಂಡು ಅವರ ಬದುಕಿನ ಚಿಂತನೆಗಳನ್ನೇ ಬದಲಿಸಿಕೊಳ್ಳುವಂತೆ ಮಾಡಿತು. ಸ್ವಾಮಿ ವಿವೇಕಾನಂದರ ಬೋಧನೆಗಳ ಪ್ರಿಯರಾದ ಅಣ್ಣಾ ಹಜಾರೆಯವರು ಆ ಕ್ಷಣದಲ್ಲೇ ತಮ್ಮ ಬದುಕನ್ನು ಮಾನವಸೇವೆಗೆ ಮುಡಿಪಾಗಿಡಲು ನಿರ್ಧರಿಸಿದರು. ಹಾಗೆಂದು ಅವರು ತಕ್ಷಣದಲ್ಲೇ ಸೈನ್ಯವನ್ನೇನೂ ಬಿಟ್ಟು ಬರಲಿಲ್ಲ. ಮುಂದೆ ಇನ್ನೂ ಹನ್ನೆರಡು ವರ್ಷಗಳ ಕಾಲ ಸೈನ್ಯದಲ್ಲಿದ್ದು ನಂತರದಲ್ಲಿ ತಮ್ಮ ಬರಡುಹಳ್ಳಿಗೆ ಬಂದರು. ತಮ್ಮ ಬ್ರಹ್ಮಚರ್ಯ, ನಿಷ್ಕಲ್ಮಶವಾದ ಮನ, ದೃಢ ಸಂಕಲ್ಪ ಮತ್ತು ಮಾನವಪ್ರೇಮಗಳಿಂದ ರಾಲೇಗನ್ ಸಿದ್ಧಿ ಎಂಬ ಹಳ್ಳಿಯ ಹಾಳೆಯ ಮೇಲೆ ನವಕಾವ್ಯ ಬರೆಯುತ್ತಾ ಹೋದರು. ಹೆಂಡದಂಗಡಿಗಳನ್ನು ಮುಚ್ಚಿ, ನೀರಿನಮೃತದ ಚಿಲುಮೆಗೆ ಹರಿಕಾರ ಹಾಕಿ ಊರನ್ನು ಸ್ವಾವಲಂಬಿಯಾಗಿ ಮಾಡಲು ಪ್ರೇರಣೆ ಇತ್ತರು ಅಣ್ಣಾ. ಶಾಲೆ, ಡೈರಿ, ಸಹಕಾರ ಸಂಘ, ಕಲ್ಯಾಣ ಮಂಟಪ, ದವಸ ಧಾನ್ಯ ಶೇಖರಣಾ ಕೇಂದ್ರ, ಹಣಕಾಸಿನ ಬ್ಯಾಂಕು, ಸ್ವಯಂ ಸೇವಾ ಸಂಘಗಳು ಇವನ್ನೆಲ್ಲಾ ತಾವೇ ತಾವಾಗಿ ಜನ ಮಾಡುತ್ತಾ ಬಂದರು. ಮನುಷ್ಯನ ಮನಸ್ಸು ಏನೂ ಮಾಡಲು ತೋಚದಿದ್ದಾಗ ಕೆಟ್ಟ ಚಟಗಳ ದಾಸನಾಗುತ್ತದೆ. ಅದಕ್ಕೆ ಒಂದು ಮಹದುದ್ದೇಶ ಕೊಟ್ಟಲ್ಲಿ ಅದು ಸ್ವಯಂ ತಾನೇತಾನಾಗಿ ಸ್ವರ್ಗವನ್ನೇ ಸೃಷ್ಠಿಮಾಡಿಕೊಳ್ಳಬಲ್ಲದು! ಅಣ್ಣಾ ತಮ್ಮ ಊರಿನ ಜನಕ್ಕೆ ಅಂತಹ ಸದುದ್ಧೇಶವನ್ನು ಹಾಕಿಕೊಟ್ಟವರು.
ಅಭಿವೃದ್ಧಿಯು ಭ್ರಷ್ಟಾಚಾರದಿಂದಾಗಿ ಕುಂಠಿತಗೊಂಡಿದೆ ಎಂದು ಮನಗಂಡು, ಅಣ್ಣಾ 1991ರಲ್ಲಿ ಭ್ರಷ್ಟಾಚಾರ ವಿರೋಧೀ ಜನ ಆಂದೋಲನ ಎಂಬ ಚಳವಳಿಯನ್ನಾರಂಬಿಸಿದರು. 42 ಅರಣ್ಯಾಧಿಕಾರಿಗಳು ಸರ್ಕಾರಿ ಸಂಸ್ಥೆಯಲ್ಲಿನ ಭ್ರಷ್ಟಾಚಾರದಿಂದಾಗಿ ರಾಜ್ಯ ಸರ್ಕಾರಗಳಿಗೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದರು ಎಂಬುದು ತಿಳಿದುಬಂದಿತು. ಹಜಾರೆ ಅವರು ಸರ್ಕಾರಕ್ಕೆ ಪುರಾವೆಗಳನ್ನು ಒದಗಿಸಿದರೂ ಆಳುವ ಪಕ್ಷದ ಒಬ್ಬ ಮಂತ್ರಿಯೂ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡು ಆ ಅಧಿಕಾರಿಗಳ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ನಿರಾಕರಿಸಿತು. ಇದರಿಂದ ಮನನೊಂದ ಹಜಾರೆ ಅವರು ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಗೆ ಹಿಂದಿರುಗಿಸಿದರು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ನೀಡಿದ್ದ ವೃಕ್ಷ ಮಿತ್ರ ಪ್ರಶಸ್ತಿಯನ್ನೂ ಕೂಡ ಹಿಂದಿರುಗಿಸಿದರು.
ಇದೇ ವಿಷಯದ ಸಲುವಾಗಿ ಅವರು ಆಮರಣಾಂತ ಉಪವಾಸ ಕೈಗೊಂಡರು. ಕೊನೆಗೂ ನಿದ್ದೆಯಿಂದ ಎಚ್ಚೆತ್ತ ಮನೋಭಾವನೆಗಳಲ್ಲಿ ಪರಿಣಾಮ ಬೀರಿತು - ಆರು ಮಂತ್ರಿಗಳು ರಾಜೀನಾಮೆ ಕೊಟ್ಟರು ಮತ್ತು ವಿವಿಧ ಕಛೇರಿಗಳ ನಾನೂರಕ್ಕೂ ಹೆಚ್ಚು ಅಧಿಕಾರಿಗಳು ಮನೆಗೆ ಕಳುಹಿಸಲ್ಪಟ್ಟರು.
ಇದೆಲ್ಲಾ ಅಂದುಕೊಂಡಷ್ಟು ಸುಲಭದಲ್ಲಿ ಆಗುವಂತದ್ದಲ್ಲ. ಆದರೆ ನೈತಿಕಶಕ್ತಿಯ ಮುಂದೆ ಅಹಂಕಾರಿ ಶಕ್ತಿ ಯಾವುದನ್ನೂ ಕಿತ್ತುಕೊಳ್ಳುವಷ್ಟು ಶಕ್ತಿಶಾಲಿಯಾಗಿರುವುದಿಲ್ಲ! 1998ರಲ್ಲಿ ಮಹಾರಾಷ್ಟ್ರ ಸಮಾಜ ಕಲ್ಯಾಣ ಮಂತ್ರಿಗಳಾಗಿದ್ದ ಬಬನ್‌ರಾವ್ ಗೊಳಪ್‌ರವರು ಮಾನನಷ್ಟ ಮೊಕ್ಕದ್ದಮೆಯನ್ನು ಹೂಡಿ ಅಣ್ಣಾ ಹಜಾರೆಯವರ ಬಂದನಕ್ಕೆ ಕಾರಣರಾದರು. ಆದರೆ ಸಾರ್ವಜನಿಕರ ಪ್ರತಿಭಟನೆಯ ಕಾರಣದಿಂದಾಗಿ ಅಣ್ಣಾ ಅವರನ್ನು ಜೈಲು ಬಂಧನದಲ್ಲಿರಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ!.
ಮಾಹಿತಿ ಹಕ್ಕು ಕಾಯ್ದೆ - 2005 ಕಾರ್ಯಗತವಾದ ಮೇಲೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುತ್ತಾ ಹಜಾರೆಯವರು ರಾಜ್ಯದಲ್ಲಿ 12000 ಕಿ.ಮೀಗೂ ಹೆಚ್ಚು ದೂರ ಸಂಚರಿಸಿದ್ದಾರೆ. ಎರಡನೇ ಹಂತದಲ್ಲಿ ಇವರು ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳೊಂದಿಗೆ ಸಂವಹನ ನೆಡೆಸಿದ್ದಾರೆ ಮತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನೂ ಆಯೋಜಿಸಿದ್ದಾರೆ. ಮೂರನೇ ಹಂತವು 155 ತೆಹಸಿಲ್ ಜಾಗಗಳಲ್ಲಿ ಪ್ರತಿದಿನ 2 - 3 ಸಾರ್ವಜನಿಕ ಸಭೆಗಳನ್ನು ಒಳಗೊಂಡಿತ್ತು. ಈ ಮಹಾಚಳವಳಿಯಲ್ಲಿ ಭಿತ್ತಿಪತ್ರಗಳು ಪ್ರದರ್ಶನಗೊಂಡವು ಮತ್ತು ಕಾಯ್ದೆಯ ನಿಬಂಧನೆಗಳ ಪುಸ್ತಕಗಳನ್ನು ಸಾಮಾನ್ಯ ದರದಲ್ಲಿ ವಿತರಿಸಲಾಯಿತು. ಇದು ಸಾಕಷ್ಟು ಜಾಗೃತಿಯನ್ನುಂಟುಮಾಡಿತು ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಜನರು ತಿಳಿದುಕೊಳ್ಳಲು ಸಹಾಯನೀಡಿತು.
ಮುಂದೆ ಅಣ್ಣಾ ಹಜಾರೆ ಅವರು ಲೋಕಪಾಲ ಮಸೂದೆಯ ಅನುಷ್ಠಾನಕ್ಕೆ ಹೋರಾಡಿ ತಮ್ಮ ಅಧ್ಯಾತ್ಮಿಕ ಮನೋಭಾವದಿಂದ ಇಡೀ ದೇಶವನ್ನೇ ಒಂದೇ ದನಿಯಾಗಿಸಿದ್ದು ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತು. ನಮ್ಮ ರಾಜಕೀಯ ವ್ಯವಸ್ಥೆ, ಆಡಳಿತ ವ್ಯವಸ್ಥೆ ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಹಲವು ದ್ವಂದ್ವಗಳ ಸಾರ್ವಜನಿಕ ಮನೋಭಾವನೆಯಲ್ಲಿ ಎಲ್ಲವನ್ನೂ ಯಶಸ್ಸಿನ ಆಧಾರದ ಮೇಲೆ ಅಳೆಯುವ ಪ್ರವೃತ್ತಿಗಳು ನಿರಂತರವಾಗಿವೆ. ಮಹಾಭಾರತದ ಯುದ್ಧದಲ್ಲಿ, ಅಲೆಕ್ಸಾಂಡರ್, ನೆಪೋಲಿಯನ್, ಹಿಟ್ಲರ್ ಅವರುಗಳು ನಡೆಸಿರುವ ಮಹತ್ವಾಕಾಂಕ್ಷೆಗಳ ಹೋರಾಟದಲ್ಲಿ, ವಿಶ್ವದಲ್ಲಿ ನಡೆದಿರುವ ಯುದ್ಧದ ಚರಿತ್ರೆಗಳಲ್ಲಿ ಮತ್ತು ನಡೆಯುತ್ತಿರುವ ನಿರಂತರವಾದ ಯುದ್ಧದ ಸಿದ್ಧತೆಗಳಲ್ಲಿ ಸಾಧ್ಯವಾಗದೇ ಹೋಗಿರುವುದನ್ನು ಮತ್ತು ಸಾಧ್ಯವಿಲ್ಲ ಎಂದು ಗೊತ್ತಿರುವುದನ್ನು ಗೊತ್ತಿದ್ದೂ ಗೊತ್ತಿದೂ ಅಳೆಯುವ ಮೂರ್ಖತನವನ್ನು ನಾವು ಮಾಡುತ್ತಲೇ ಇರುತ್ತೇವೆ. ನಾವು ನೆನಪಿಡಬೇಕಾದ ಒಂದೇ ಒಂದು ಅಂಶವೆಂದರೆ ಮೌಲ್ಯಕ್ಕೆ ಮಾತ್ರ ಜಯ. ಅದು ರಾಮನಾಗಿರಬಹುದು, ಕೃಷ್ಣನಾಗಿರಬಹುದು, ಗಾಂಧೀ ಆಗಿರಬಹುದು, ಅಬ್ರಹಾಂ ಲಿಂಕನ್ ಆಗಿರಬಹುದು, ಈಜಿಪ್ಟಿನಲ್ಲಿ ಕಳೆದ ವರ್ಷ ನಡೆದ ಜನಾಂದೋಳನ ಆಗಿರಬಹುದು ಅಥವಾ ಈಗ ನಾವು ಚಿಂತಿಸುತ್ತಿರುವ ಅಣ್ಣಾ ಹಜಾರೆ ಅವರ ಕಾಯಕಕ್ಕೆ ದೊರಕುತ್ತಿರುವ ಸ್ಪಂದನೆಗಳಿರಬಹುದು. ಇಲ್ಲಿ ನಾವು ಆಗಿರುವ ಯಶಸ್ಸನ್ನು ತೂಕ ಹಾಕಲಿಕ್ಕೆ ಹೋದಾಗಲೆಲ್ಲಾ ಸೋಲುಗಳನ್ನೇ ಕಾಣುತ್ತಿರುತ್ತೇವೆ. ನಮ್ಮ ಹೋರಾಟಗಳಲ್ಲಿರುವುದು ಸ್ವಯಂಪರಿವರ್ತನೆ ಅಥವಾ ಆತ್ಮ ಪರಿವರ್ತನೆ ಎಂದರಿತುಕೊಂಡಾಗ ಮಾತ್ರ ನಮ್ಮ ಪರಿಮಿತಿಗಳಲ್ಲೇ ಸ್ವರ್ಗಸೃಷ್ಟಿಯ ಕಾಯಕದಲ್ಲಿ ತೊಡಗಿರುತ್ತೇವೆ.
ಅಣ್ಣಾ ಹಜಾರೆ ಅವರಿಗೆ ನೈತಿಕ ಸಾಮರ್ಥ್ಯವಿದೆ. ಆದರೆ ಅವರ ದೇಹಕ್ಕೆ ಒಂದು ಮಿತಿ ಇದೆ. ಇದು ಕೂಡಾ ಸತ್ಯದ ಮತ್ತೊಂದು ಮುಖವಾಡ. ಪ್ರಪಂಚದಲ್ಲಿ ಯಾವ ಮಹಾತ್ಮರೂ ಸ್ಥಿರವಾಗಿ ಉಳಿಯಲಿಕ್ಕೆ ಸಾಧ್ಯವಾಗಲಿಲ್ಲ. ಪ್ರಕೃತಿ ನಿಯಮವನ್ನು ಯಾವುದೂ ಮೀರಲಿಕ್ಕೆ ಸಾಧ್ಯವಿಲ್ಲ. ಆದರೆ ಈ ಮಹಾತ್ಮರು ನೆಟ್ಟ ಬೀಜಗಳು ಮಾತ್ರವೇ ಈ ಪ್ರಪಂಚವನ್ನು ಒಂದಷ್ಟು ಸಹ್ಯವಾಗಿಸಲು ಪ್ರೇರಕವಾಗಿರುವಂತದ್ದು. ಈ ಪ್ರೇರಣೆಯನ್ನು ಭಾರತೀಯ ಸಮಾಜವಾದ ನಾವು ನಮ್ಮ ಎಲ್ಲ ಸೋಗುಗಳನ್ನೂ ಬಿಟ್ಟು ಮೌಲ್ಯಯುತವಾಗಿ ಸ್ವೀಕರಿಸಿ ನಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳುತ್ತೇವೆ ಎಂದು ದೃಢ ಸಂಕಲ್ಪ ಮಾಡಿದಾಗ ಅದು ನಮಗೂ ಉಪಯುಕ್ತವಾಗುತ್ತದೆ, ನಮ್ಮ ದೇಶಕ್ಕೂ ಉಪಯುಕ್ತವಾಗುತ್ತದೆ. ಹಾಗೆ ಮಾಡದೆ ಅಣ್ಣಾ ಹಜಾರೆ ಎಂಬ ಹೆಸರಿನಿಂದ ಮಾತ್ರ ನಮಗೆ ರಾಮರಾಜ್ಯ ಬರುತ್ತದೆ ಎಂದು ಭಾವಿಸಿಕೊಂಡು ಕುಳಿತಿದ್ದರೆ, ನಾವು ಕೇವಲ ಅಣ್ಣಾ ಹಜಾರೆಯ ಸುತ್ತ ಆಗಾಗ ಹರಡಿ ಕಳೆದುಹೋಗುವ ಬಾಯಿ ಬಡುಕರ ಆರ್ಭಟ ಮತ್ತು ಇಂದಿನ ನೈತಿಕ ದುಸ್ಥಿತಿಯ ಅವನತಿಯಲ್ಲಿ ಧೂಳಿನ ಕಣವಾಗಿ ಮಾತ್ರ ಬದುಕಲು ಸಾಧ್ಯವಾಗುತ್ತದೆ.
ಅಣ್ಣಾ ಹಜಾರೆ ಇಂದು ಸಾಧಿಸಹೊರಟಿರುವುದು ಯುದ್ಧದ ಗೆಲುವಲ್ಲ. ಸಾಮ್ರಾಜ್ಯ ಸ್ಥಾಪನೆಯಲ್ಲ. ಹಾಗೆ ಅಣ್ಣಾ ಹಜಾರೆ ಮಾಡಿದುದನ್ನು ಹಲವರು ಸಾಮ್ರಾಜ್ಯ ಸ್ಥಾಪನೆಯ ಮಾರ್ಗವಾಗಿಸಹೋಗಿ ಮೂರ್ಖತನ ತೋರಿಕೊಂಡರೇ ವಿನಃ ಅವರು ಪರಿವರ್ತನೆಯ ಸಾಮೀಪ್ಯಕ್ಕೂ ಬರಲಾಗಲಿಲ್ಲ. ಅಣ್ಣಾ ಹಜಾರೆ ಎಂಬುದು ಯಾವುದೇ ಹೋರಾಟಕ್ಕೂ ಮಿಗಿಲಾಗಿ ನಮ್ಮ ಆತ್ಮಸಾಕ್ಷೀ ಪ್ರಜ್ಞೆಯ ಉದ್ಧೀಪನದ ಸಾಧನ. ಅದನ್ನು ಅರ್ಥೈಸಿದವರಿಗೆ ಮಾತ್ರ ಅದರ ಲಾಭ. ಉಳಿದವರಿಗೆ ಅದು ಕೇವಲ ಗೊಂದಲ.
ಗಾಂಧೀಯುಗ ಕಳೆದುಹೋಯ್ತು ಅಂತ ಪರಿತಪಿಸಿದ್ದವರಿಗೆ; ಗಾಂಧೀಯುಗ ಈಗ ನಡೆಯುವುದಿಲ್ಲ ಎಂಬ ಮಾರುಕಟ್ಟೆ ಪಂಡಿತರ ಮಾತುಕತೆಗೆ ಸೋತು ಪ್ರಾಪಂಚಿಕ ಬದುಕಲ್ಲಿ ಸೋತು ಸುಣ್ಣವಾಗಿ ಬದುಕಲ್ಲಿ ಇನ್ನೆನ್ನೂ ಇಲ್ಲವೇ ಎಂದು ತಡಕಾಡುತ್ತಿದ್ದವರಿಗೆ ಅಣ್ಣಾ ಹಜಾರೆ ಅವರ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಎಲ್ಲ್ಲೋ ಕತ್ತಲಲ್ಲೂ ಬೆಳಕಿನ ಕೋಲ್ಮಿಂಚು ಇಲ್ಲೇ ಎಲ್ಲೋ ಸನಿಹದಲ್ಲಿದ್ದೆ ಎಂಬ ಭರವಸೆ ಹುಟ್ಟಿಸಿದೆ ಎಂಬುದಂತೂ ಖಂಡಿತ ಸತ್ಯ.
ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಕಾಂಗ್ರೆಸ್ಸ್ ಸರ್ಕಾರ ತನ್ನ ಅಧಿಕಾರವನ್ನುಪಯೋಗಿಸಿಕೊಂಡು ಅಣ್ಣಾ ಹಜಾರೆ ಮತ್ತು ಅವರ ಟೀಮಿನ ಒಗ್ಗಟ್ಟನ್ನು ಮುರಿದು ಒಬ್ಬೊರನ್ನಾಗಿ ಬೇರ್ಪಡಿಸಿ ಅಣ್ಣಾ ಹೋರಾಟದ ಹಾದಿಯ ದಿಕ್ಕನ್ನೇ ತಪ್ಪಿಸಿ ಮೆರೆಯಿತು.
ಆದರೆ ಅಣ್ಣಾ ಅವರ ಹೋರಾಟದಿಂದ ಎಚ್ಚೆತ್ತ ಭಾರತೀಯ ಜನತೆ ಕಾಂಗ್ರೆಸ್ಸ್ ಸರ್ಕಾರದ ಭ್ರಷ್ಟತೆಯ ಪರಕಾಷ್ಟತೆಯನ್ನು ಕೆಲವೇ ದಿನಗಳಲ್ಲಿ ಗುರುತಿಸುವಂತಾಯಿತು ಪರಿಣಾಮ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಹೀನಾಯವಾಗಿ ಸೋತು ನರೇಂದ್ರ ಮೋದಿಗೆ ಫ್ರಧಾನಿ ಪಟ್ಟ ಸಿಗುವಂತಾಗಿದ್ದು ಸಂತೋಷದ ವಿಷಯ
ಆ ಸತ್ಯಕ್ಕೆ ಶ್ರದ್ಧೆ ಭಕ್ತಿಗಳ ನಮನ.
No comments:
Post a Comment