Translate in your Language

Thursday, June 2, 2016

ಇಳಯರಾಜಾ ಅವರಿಗೆ ೭೪ನೇ ಹುಟ್ಟುಹಬ್ಬದ ಶುಭಾಶಯಗಳು

ಇಳಯರಾಜಾ
ಕೇಳದೆ ನಿಮಗೀಗ ದೂರದಲ್ಲಿ ಯಾರೋ......(ಗೀತಾ)
ಯಾವ ಶಿಲ್ಪಿ ಕಂಡ ಕನಸು ನೀನು..(ಪಲ್ಲವಿ-ಅನು ಪಲ್ಲವಿ)
ನಮ್ಮೂರಮಂದಾರ ಹೂವೆ, 
ಸಿಹಿ ಗಾಳಿ..ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ
ಆ ದಿನಗಳು, ಜನ್ಮ ಜನ್ಮದ ಅನುಬಂಧ ......ಇಂಥಾ ಚಿತ್ರಗಳ ಹಾಡುಗಳನ್ನು ಕನ್ನಡಿಗರು ಮರೆಯಲಾದೀತೆ ?

ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ 2, 1943ರ ವರ್ಷದಲ್ಲಿ ಜನಿಸಿದರು.  ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ  ಸಂಗೀತ ಸಂಯೋಜನೆಯಲ್ಲಿ ಸುಮಧುರ ಗೀತೆಗಳು ಹರಿದು ಬಂದಿವೆ.  ಅವರು ಗಾಯನ ಮತ್ತು ಗೀತರಚನೆಗಳಲ್ಲೂ ಪ್ರಸಿದ್ಧರು.

ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ.  ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ  ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ.  ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಮಾತ್ರ ಅದಕ್ಕೊಂದು ಗೌರವ ಮೂಡುತ್ತದೆ.  ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು.  ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.


ಇಳಯರಾಜಾ ಈ ಇಳೆಯ ಸಂಗೀತ ಲೋಕದ ರಾಜರೇ ಹೌದು.  ಆದರೆ ರಾಜ ಎನ್ನುವುದು ಒಂದು ಸ್ಥಾನಮಾನಕ್ಕೆ ಸೀಮಿತವಾದ ಪದ.  ಇಳಯರಾಜಾ ಸಂಗೀತ ಲೋಕದ ಅಂತರಂಗದ ಒಂದು ಎಳೆಗೆ ಸಮೀಪರು.  ಅವರ ಪ್ರಸಿದ್ಧ ಚಿತ್ರಗಳನ್ನು ಹೇಳುತ್ತಾ ಹೋದರೂ ಕೂಡಾ ಹಲವು ಪುಟಗಳು ಬೇಕಾದೀತು.  ಅವರಿಗೆ ರಾಷ್ಟ್ರ ಪ್ರಶಸ್ತಿ ತಂದ 'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ) ಚಿತ್ರಗಳ ಆಚೆಗೆ ಕೂಡಾ ಅವರು ಸಂಗೀತ ಸಂಯೋಜಿಸಿರುವ ಸುಮಾರು ಸಾವಿರ ಚಿತ್ರಗಳು ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳಲ್ಲಿ ಸಂಗೀತ ಲೋಕದ ಮುತ್ತುರತ್ನಗಳು ವಿಶಿಷ್ಟವಾಗಿ ಅರಳಿವೆ.  ಗೀತ ರಚನೆಕಾರರಾಗಿ ಮತ್ತು ಗಾಯಕರಾಗಿ ಕೂಡಾ ಅವರು ಅಪ್ರತಿಮರು.

ಕನ್ನಡದಲ್ಲಿ ಕೂಡಾ ಗೀತಾ, ಜನ್ಮಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು.  ಹಿಂದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದ 'ಚೀನೀ ಕಂ', 'ಪಾ' ವರೆಗಿನ ಹಲವು ಚಿತ್ರಗಳಲ್ಲಿ ಕೂಡಾ ಅವರ ಗಾನ ಗಂಗೆ ಹರಿದಿದೆ. 

ಪ್ರಾರಂಭದ ದಿನಗಳಲ್ಲಿ ನಮ್ಮ ಬಿ.ಕೆ ಸುಮಿತ್ರ ಅವರ ಗಾನಗೊಷ್ಟಿಗಳಲ್ಲಿ ವಾದ್ಯಗಾರರಾಗಿ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿ ಬೆಳೆದ ಇಳಯರಾಜಾ, ಇಂದು ಚಲನಚಿತ್ರರಂಗದ ಮೇರು ಪರ್ವತವೇ ಆಗಿದ್ದಾರೆ.     

ಇಳಯರಾಜಾ ಅವರಿಗೆ ಬಂದಿರುವ ಗೌರವ, ಪುರಸ್ಕಾರ ಸಮ್ಮಾನಗಳು ಅಸಂಖ್ಯಾತ.  ಅವೆಲ್ಲವನ್ನೂ ಮೀರಿದ ಕಲಾಸಾಧಕ ಅವರು ಎಂಬುದು ಇಡೀ ಲೋಕವೇ ಒಪ್ಪುವ ಮಾತು.  ಇಂತಹ ಹೆಮ್ಮೆಯ ಸಾಧಕನಿಗೆ ಶುಭಪ್ರದ ಹುಟ್ಟು ಹಬ್ಬದ ಆಶಯಗಳನ್ನು ಹೇಳುವಲ್ಲಿ ಲೋಕದ ಸಂಗೀತಪ್ರಿಯರೊಂದಿಗೆ ನಾವೂ ಸೇರೋಣ.  ಇಳಯರಾಜಾರ ಬದುಕು ಸುಂದರವಾಗಿರಲಿ.  ಅವರ ಸುಂದರ ಸಂಗೀತ ಸಂಯೋಜನೆಗಳನ್ನು ನಿರಂತರ ಕೇಳುತ್ತಿರುವಂತಾಗಲಿ.

No comments:

Post a Comment