Translate in your Language

Friday, July 15, 2016

ರಂ.ಶ್ರೀ ಮುಗಳಿ ಅವರ 111ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ರಂ.ಶ್ರೀ. ಮುಗುಳಿ
ರಂ.ಶ್ರೀ. ಮುಗುಳಿಯವರು ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ 1906 ರಲ್ಲಿ ಜುಲೈ 15 ರಂದು ಜನಿಸಿದರು. ಇವರ ತಂದೆ ಶ್ರೀನಿವಾಸರಾಯರು. ತಾಯಿ ಕಮಲಮ್ಮನವರು. ರಸಿಕರಂಗ ಎಂಬುದು ಇವರ ಕಾವ್ಯನಾಮ. ರಂಗನಾಥ ಶ್ರೀನಿವಾಸ ಇವರ ಪೂರ್ಣ ಹೆಸರು. ಇವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಬಿಜಾಪುರದ ಬಾಗಲಕೋಟೆಗಳಲ್ಲಿ ನಡೆಯಿತು. ೧೯೨೪ರಲ್ಲಿ ಧಾರವಾಡಕ್ಕೆ ಬಂದು ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಬಿ.ಎ. (ಸಂಕೃತ ಅನರ‍್ಸ್) ೧೯೩೦ರಲ್ಲಿ ಎಂ.ಎ. (ಕನ್ನಡ) ಪದವಿಯನ್ನು ಪಡೆದರು. ಪಡೆದರು. ಇಂಗ್ಲಿಷ್‌ನಲ್ಲಿಯೂ ಎಂ.ಎ. ಪದವಿಯನ್ನು ಪಡೆದರು. ಅನಂತರ ಮುಂಬಯಿಯಲ್ಲಿ ಬಿ.ಟಿ. ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದರು. ಅನಂತರ ೧೯೩೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾದರು.
೧೯೩೩ರಲ್ಲಿ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನ ಪ್ರಾಂಶುಪಾಲರಾದರು. ೧೯೬೬ರಲ್ಲಿ ಈ ಹುದ್ದೆಯಿಂದ ನಿವೃತ್ತರಾದರು. ಕರ್ನಾಟಕ ಸರ್ಕಾರದ ಸಾಹಿತ್ಯ, ಸಂಸ್ಕೃತಿ ಇಲಾಖೆಯ ನಿರ್ದೇಶರಾಗಿ ಆರು ತಿಂಗಳ ಕಾಲ ಸೇವೆ ಸಲ್ಲಿಸಿದರು. ೧೯೬೭ ರಿಂದ ೧೯೭೦ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ೧೯೪೦-೪೩ರವರೆಗೆ ಜೀವನ ಪತ್ರಿಕೆಯ ಸಂಪಾದಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಯೋಜನೆಗಳಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದರು.
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಪ್ರಸಿದ್ದ ವಿದ್ವಾಂಸರು. ಧಾರವಾಡದ ಗೆಳೆಯರ ಗುಂಪಿನ ಬೇಂದ್ರೆ ಮತ್ತು ಗೋಕಾಕರ ಸಹಚರ್ಯೆಯಿಂದ ಕಾವ್ಯ ಸಾಧನೆಯಲ್ಲಿ ತೊಡಗಿದರು. ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ಅರಳಿಸಿಕೊಂಡ ಇವರು ಸಾಹಿತ್ಯ ಚರಿತ್ರೆಕಾರರಾಗಿ ವಿಮರ್ಶಕರಾಗಿ ಕನ್ನಡ ನಾಡಿನಲ್ಲಿ ಸುವಿಖ್ಯಾತರಾಗಿದ್ದು ಅನೇಕ ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇವರು ೧೯೯೩ರ ಫೆಬ್ರವರಿ ೨೦ ರಂದು ನಿಧನರಾದರು. 

ಕೃತಿಗಳು
ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಸಾಹಿತ್ಯ ಚರಿತ್ರೆ ಅದರ ರೂಪಗಳು, ಕೃತಿರತ್ನ, ತವನಿಧಿ, ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು, ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ, ಬಾಸಿಂಗ, ಅಪಾರ ಕರುಣೆ, ಓಂ ಅಶಾಂತಿ, ಅನ್ನ, ಕಾರಣ ಪುರುಷ, ಎತ್ತಿದ ಕೈ, ಮನೋರಾಜ್ಯ, ಧನಂಜಯ್ಯ, ಹೆರಿಟೇಜ್ ಆಫ್ ಕರ್ನಾಟಕ, ಹಿಸ್ಟರಿ ಆಫ್ ಕನ್ನಡ ಲಿಟರೇಚರ್ ಇವು ಇವರ ಕೃತಿಗಳು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೪೧ರಲ್ಲಿ ಹೈದರಾಬಾದಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಇವರು ನಾಟಕಗೋಷ್ಠಿಯ ಅಧ್ಯಕ್ಷರಾಗಿದ್ದರು. 
೧೯೫೫ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿಮರ್ಶಾ ಗೋಷ್ಠಿಯ ಅಧ್ಯಕ್ಷರಾಗಿದ್ದರು.
೧೯೫೬ರಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಕೃತಿಗೆ ಪುಣೆ ವಿಶ್ವವಿದ್ಯಾಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತು.
೧೯೫೬ರಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೬೩ರಲ್ಲಿ ಸಿದ್ಧಗಂಗಾದಲ್ಲಿ ನಡೆದ ೪೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 
೧೯೬೪ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫೆಬ್ರವರಿಯಲ್ಲಿ ನಡೆದ ಜಾಗತಿಕ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪ್ರತಿನಿಧಿಯಾಗಿ ಇವರು ಭಾಗವಹಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 
೧೯೭೬ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

No comments:

Post a Comment