Translate in your Language

Saturday, July 2, 2016

ಗೋಲ್ಡನ್ ಸ್ಟಾರ್ ಗಣೇಶ್ ಅವರ 39ನೇ ಹುಟ್ಟುಹಬ್ಬದ ಶುಭಾಶಯಗಳು !

Golden Star Ganesh 
ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನರಂತಹ ಮೇರು ನಟರು ಮರೆಯಾಗಿ, ಕೆಲವೊಂದು ನಟರೆಲ್ಲಾ ಅರೆ ಬರೆ ಗಡ್ಡ ಬಿಟ್ಟು, ಪಕ್ಕದ ರಾಜ್ಯದ ಕೆಲವು  ಹೀರೋಗಳಂತೆ ತಮ್ಮ ಮುಖಕ್ಕೊಪ್ಪುವಂತೆ  ಕಪ್ಪು ಕನ್ನಡಕ ಧರಿಸಿಯೋ,  ಮಚ್ಚು – ಕತ್ತಿ – ಚೈನುಗಳನ್ನು ಹಿಡಿದ ವಕ್ರವದನಾರವಿಂದರಾಗಿಯೋ ವಿಭಿನ್ನ ದಾರಿ ಹಿಡಿದಿದ್ದ ಸಮಯದಲ್ಲಿ, ಅಲ್ಲಲ್ಲಿ ದೂರದರ್ಶನ ಮತ್ತು ಚಿತ್ರರಂಗದಲ್ಲಿನ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚುತ್ತಿದ್ದ ಗಣೇಶ್ ಎಂಬ ಹುಡುಗ ‘ಮುಂಗಾರು ಮಳೆ’ ಎಂಬ ಯೋಗರಾಜ ಭಟ್ಟರ ದೃಶ್ಯ ಕಾವ್ಯದೊಂದಿಗೆ ಹೊಸ ಭರವಸೆ ತಂದರು.  ಜುಲೈ 2,1977, ಇವರ ಹುಟ್ಟು ಹಬ್ಬ.  ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿ ಇವರ ಹುಟ್ಟೂರು. 


ದೂರದರ್ಶನದಲ್ಲಿ ಕೆಲವೊಂದು ಕಾರ್ಯಕ್ರಮಗಳು ನಿರೂಪಕನ ಮೋಡಿಯಿಂದಲೇ ಜನಪ್ರಿಯವಾಗಿಬಿಡುತ್ತವೆ.  ಗಣೇಶ್ ನಡೆಸಿದ ‘ಕಾಮಿಡಿ ಟೈಂ’ ಕೂಡ ಅಂತಹ ವಿಶೇಷ ಮೋಡಿ ಹಾಕಿತ್ತು.  ಅಂದಿನ ದಿನಗಳಲ್ಲಿ ನಾವೆಲ್ಲರೂ ತಪ್ಪದೆ ನೋಡುತ್ತಿದ್ದ ‘ಪಾಪ ಪಾಂಡು’ ಧಾರಾವಾಹಿಗಳಲ್ಲಿ ಗಣೇಶ ಡೌಟೇಶನಾಗಿ ಮಿಂಚುತ್ತಿದ್ದುದು ಈತ ಒಂದು ದಿನ ಉತ್ತಮ ಹಾಸ್ಯ ನಟನಾಗಬಲ್ಲ ಎಂಬ ಅನಿಸಿಕೆ ನೀಡುತ್ತಿತ್ತು   ‘ಮುಂಗಾರ ಮಳೆ’ಯ ಆಗಮನದೊಂದಿಗೆ ಗಣೇಶ್ ಹಾಸ್ಯ, ಕರುಣೆ, ಪ್ರೇಮ, ದೈನ್ಯ, ದುಃಖ, ಕ್ಲೀಷೆಗಳಂತಹ ವಿಭಿನ್ನ ಭಾವಗಳನ್ನು ಯೋಗರಾಜ ಭಟ್ಟರ ಕಣ್ಣಾಗಿ ಹೊರಹೊಮ್ಮಿಸಿಬಿಟ್ಟು ಎಲ್ಲರಿಗೂ ಪ್ರಿಯನಾಗಿಬಿಟ್ಟರು. 

ಮುಂದೆ ಗಣೇಶ್ ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಅರಮನೆ, ಬೊಂಬಾಟ್, ಸಂಗಮ, ಸರ್ಕಸ್, ಉಲ್ಲಾಸ ಉತ್ಸಾಹ, ಮಳೆಯಲಿ ಜೊತೆಯಲಿ, ಏನೋ ಒಂತರ, ಕೂಲ್, ಮದುವೆ ಮನೆ, ಶೈಲೂ, ಮುಂಜಾನೆ, ರೋಮಿಯೋ,  ಮಿ.420, ಅಟೋರಾಜಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ಗಣೇಶ್ ‘ಕೂಲ್’  ಎಂಬ ಚಿತ್ರಕ್ಕೆ ನಿರ್ದೇಶನ ಕೂಡಾ ಮಾಡಿದ್ದರು. ಗಣೇಶರ   ಕೆಲವು ಚಿತ್ರಗಳು ಅವರಿಗೆ ಪ್ರಶಸ್ತಿ, ಪ್ರಶಂಸೆಗಳನ್ನೂ ತಂದಿವೆ.   ಈ ಕೆಲವು ಚಿತ್ರಗಳಲ್ಲಿ ಅವರ ಅಭಿನಯ ‘ಮುಂಗಾರು ಮಳೆ’ ಚಿತ್ರದಲ್ಲಿ ವ್ಯಕ್ತವಾದ ಪ್ರತಿಭೆಯ ಕೆಲವಂಶಗಳನ್ನು ಮಾತ್ರ ಹೊರತಂದಿವೆ.  ಹಲವು ಚಿತ್ರಗಳು ಸೋತೂ ಇವೆ.  ಆದ್ದರಿಂದ, ಇನ್ನೂ ಇವರ ಸಾಧನೆ ಹೆಚ್ಚಿಗೆ ಹೊರಹೊಮ್ಮಬೇಕು ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿ  ಕಾದು ಕುಳಿತಿದೆ. 

ಚಿತ್ರರಂಗದಲ್ಲಿ ಗಣೇಶ್ ಹಲವು ಏರಿಳಿತಗಳ ಅಲೆಯಲ್ಲಿ ಸಾಗುತ್ತಿದ್ದಾರೆ.   ಒಂದು ಚಿತ್ರ ಗೆದ್ದಾಗ ಮೂಡುವ ಅಭಿಪ್ರಾಯಗಳಿಗೂ, ಸೋತಾಗ ಮೂಡುವ ಅಭಿಪ್ರಾಯಗಳಿಗೂ ಬಹಳ ವೆತ್ಯಾಸವಿರುತ್ತದೆ.  ಚಿತ್ರರಂಗದಂತಹ ವ್ಯಾಪಾರೀ ಕಲಾ ಮಾಧ್ಯಮದಲ್ಲಿ ಸುದ್ಧಿಗಳು, ವಿಮರ್ಶೆಗಳು, ಅಭಿಪ್ರಾಯಗಳು ಇವೆಲ್ಲಾ ಒಂದು ರೀತಿಯ ಗಾಸಿಪ್ ಓದಿದ ಓದಿನಂತೆಯೇ ಇರುತ್ತವೆ.  ಕನ್ನಡದಂತಹ ಮಾರುಕಟ್ಟೆಯಲ್ಲಿ ನೂರು ನೂರೈವತ್ತು ಚಿತ್ರಗಳು ವರ್ಷದಲ್ಲಿ ತೆರೆಕಂಡರೂ ಯಶಸ್ಸು ಸಿಗುವುದು ಬೆರಳೆಣಿಕೆ ಚಿತ್ರಗಳಿಗೆ ಮಾತ್ರ.  ಹಾಗಾಗಿ ಇಲ್ಲಿ ಏನು ಗೆಲ್ಲುತ್ತದೆ, ಯಾರಿಂದ ಗೆಲ್ಲುತ್ತದೆ, ಯಾರಿಂದ ಸೋಲುತ್ತದೆ ಎಂಬ ಮಾತುಗಳು ಕೂಡಾ ಗಾಸಿಫ್ ಪರಿಧಿಯಾಚೆಗೆ ನಿಲ್ಲುವಂತದ್ದಲ್ಲ. 

ಇಲ್ಲಿ ಕೊನೆಗೆ ಉಳಿಯುವಂತದ್ದು ಇಂದಿನ ದಿನದವರೆಗೆ ಕಲಾವಿದ ತನ್ನಲ್ಲಿ ಎಷ್ಟು ಮೌಲ್ಯ ಕಂಡುಕೊಂಡಿದ್ದಾನೆ, ಮುಂದಿನ ಹಾದಿಯಲ್ಲಿ ಏನನ್ನು ಚಿಂತಿಸುತ್ತಿದ್ದಾನೆ, ಮುಂದೆ ಅವ ಏನು ಮಾಡಬಲ್ಲ ಎಂಬುದು ಮುಖ್ಯವಾಗುತ್ತದೆ.  ಅಂತಹ ನಿರೀಕ್ಷೆಗಳು ಗಣೇಶ್ ಅಂತಹ ಸಾಧ್ಯತೆಗಳಿರುವ ಯುವಕನಲ್ಲಿ  ನಾವು ನಿರೀಕ್ಷಿಸಬಹುದು ಎಂಬುದು ಕನ್ನಡ ಚಿತ್ರರಸಿಕರ ಆಶಯ. 

ಗಣೇಶ್ ಈ ಎಲ್ಲಾ ನಿರೀಕ್ಷೆಗಳಿಗೆ ಪೂರಕವಾಗಿ ಬೆಳೆದು ದೊಡ್ಡ ಕಲಾವಿದನಾಗಲಿ, ಕನ್ನಡ ಚಿತ್ರರಂಗಕ್ಕೆ ಕೀರ್ತಿ ತರಲಿ, ಇಂತಹ ಹುಡುಗರಿಂದ ಒಳ್ಳೆಯ ಕೆಲಸ ಮಾಡಿಸುವವರೂ,  ಉತ್ತಮ ಚಿತ್ರ ಮೂಡಿಸುವವರೂ  ಬರಲಿ   ಎಂದು ಹಾರೈಸುತ್ತಾ, ಅವರಿಗೆ ಎಲ್ಲ ರೀತಿಯಲ್ಲಿ ಹುಟ್ಟು ಹಬ್ಬದ ಶುಭ ಹಾರೈಸೋಣ.

No comments:

Post a Comment