ಜನನ: 20ನೇ ಆಗಸ್ಟ್,1931, ಜನನ ಸ್ಥಳ: ಸಂತೇಶಿವರ, ಹಾಸನ ಜಿಲ್ಲೆ, ಕರ್ನಾಟಕ, ಭಾರತ
ಸಾಹಿತ್ಯದ ವಿಧ(ಗಳು): ಕಥೆ, ಕಾದಂಬರಿ, ಇತಿಹಾಸ
ಪ್ರಭಾವಗಳು: ಗೊರೂರು ರಾಮಸ್ವಾಮಿ ಅಯ್ಯಂಗಾರ್, ಆದಿ ಶಂಕರಾಚಾರ್ಯ, ಮಹಾತ್ಮ ಗಾಂಧಿ, ಆನಂದ ಕೆ.ಕುಮಾರಸ್ವಾಮಿ, ರಾಮಕೃಷ್ಣ ಪರಮಹಂಸ , ಸ್ವಾಮಿ ವಿವೇಕಾನಂದ
"ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ" ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇವರ ಕಾದಂಬರಿ ಪ್ರಕಾರ ಹುಲುಸಾಗಿ ಬೆಳೆದು ಅತಿ ಹೆಚ್ಚು ಓದುಗರನ್ನು ತಲುಪಿದೆ. ಒಟ್ಟಾರೆ ಇಪ್ಪತ್ತನೆಯ ಶತಮಾನ "ಕಾದಂಬರಿ ಯುಗ" ಅನ್ನಿಸಲು ಇವರ ಕೊಡುಗೆಯು ಅಪಾರವಾಗಿದೆ. ಈ ಪರಂಪರೆಯಲ್ಲಿ ಜನ ಮನ ಮುಟ್ಟಿದ ಸಾಹಿತಿಗಳು ಬರೆದೇ ಬದುಕನ್ನು ರೂಪಿಸಿ ಕೊಂಡವರಿದ್ದಾರೆ. ಇದಲ್ಲದೆ ಬದುಕಿಗೊಂದು ವೃತ್ತಿಯಿದ್ದು ವಿವಿಧ ಓದುಗರ ನಡುವೆ ಕನ್ನಡ ಸಾಹಿತ್ಯಕ್ಕೆ ಭಾಷೆ, ವಸ್ತು, ವಿನ್ಯಾಸದ ಹೊಸತು ಕೊಟ್ಟವರೂ ಇದ್ದಾರೆ. ಬರವಣಿಗೆ ಪ್ರವೃತ್ತಿಯಾಗಿಸಿಕೊಂಡು, ಅಕಾಡೆಮಿಕ್ ಆಗಿದ್ದೂ, ಹೆಚ್ಚು ಓದುಗರನ್ನು ತಲುಪಿದ ಜನಪ್ರಿಯ ಕಾದಂಬರಿಕಾರರೆಂದರೆ ಡಾ| ಎಸ್.ಎಲ್. ಭೈರಪ್ಪ ಅವರು. ತಾವು ಆಯ್ಕೆ ಮಾಡಿಕೊಂಡ ವಸ್ತು, ಅದನ್ನು ನಡೆಸುವ ರೀತಿ, ಅದಕ್ಕೊಂದು ಅಂತ್ಯ ಕೊಡುವ ಲೇಖಕನ ಮನೋಸ್ಥಿತಿ ಬಗ್ಗೆ ಚರ್ಚೆಗಳಲ್ಲಿ ಭಿನ್ನ ಅಭಿಪ್ರಾಯಗಳೂ ಇವೆ. ಇಂಥ ಸಂದರ್ಭದಲ್ಲೂ ಭೈರಪ್ಪನವರ ಕಾದಂಬರಿಗಳು ಬಹು ಓದುಗರ ಚರ್ಚೆಯಲ್ಲಿರುತ್ತವೆ. ಮಾಧ್ಯಮಗಳಲ್ಲಿ ವಿಮರ್ಶೆ ಮೂಲಕ ಭಿನ್ನಾಭಿಪ್ರಾಯಗಳು ಆಗಾಗ್ಗೆ ತಲೆದೋರಿದರೂ, ಅದು ಒಂದು ವಲಯದ ಚರ್ಚೆಯೆಂದು ಅಭಿಪ್ರಾಯಪಡುವವರೂ ಇದ್ದಾರೆ