ಕನ್ನಡದ ಪ್ರತಿಭಾನ್ವಿತ, ಸೃಜನಶೀಲ ಗದ್ಯ ಲೇಖಕರಾದ ಯಶವಂತ ಚಿತ್ತಾಲರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹನೇನಹಳ್ಳಿ. ತಂದೆ ವಿಠೋಬ, ತಾಯಿ ರುಕ್ಮಿಣಿ. (ಇವರ ಅಣ್ಣನೇ ಪ್ರಸಿದ್ಧ ಕವಿ ಗಂಗಾಧರ ಚಿತ್ತಾಲರು) ಪ್ರಾರಂಭಿಕ ವಿದ್ಯಾಭ್ಯಾಸ ಹನೇನಹಳ್ಳಿ, ಕುಮಟಾಗಳಲ್ಲಿ. ಉನ್ನತ ವಿದ್ಯಾಭ್ಯಾಸ ಧಾರವಾಡ ಮತ್ತು ಅಮೆರಿಕ. ೧೯೭೨ರಲ್ಲಿ ಅಮೆರಿಕದ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿ ರಾಸಾಯನಿಕ ತಂತ್ರಜ್ಞಾನದಲ್ಲಿ ಪಡೆದ ಸ್ನಾತಕೋತ್ತರ ಪದವಿ.
ಉದ್ಯೋಗಿಯಾಗಿ ಸೇರಿದ್ದು ಮುಂಬಯಿಯ ಬೇಕ್‌ಲೈಟ್ ಹೈಲ್ಯಾಮ್ ಲಿ. ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಪ್ಲಾಸ್ಟಿಕ್ ಅಂಡ್ ರಬ್ಬರ್ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಮುಂಬಯಿಯ ಇಂಡಿಯನ್ ಪ್ಲಾಸ್ಟಿಕ್ ಮತ್ತು ಅಮೆರಿಕದ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ನಡೆಸಿದ ಹಲವಾರು ಸಂಶೋಧನೆಗಳು.






